ಅಂಟಾಲ್ಯ: ಭಾರತದ ಮಹಿಳಾ ಆರ್ಚರಿ ತಂಡವು ವಿಶ್ವಕಪ್‌ನಲ್ಲಿ ಈಸ್ಟೊನಿಯಾ ವಿರುದ್ಧ ಮೂರನೇ ಹಂತದಲ್ಲಿ ಚಿನ್ನ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಹಾಗೂ ಪ್ರಣೀತ್ ಕೌರ್ ಅವರಿದ್ದ ಭಾರತೀಯ ತಂಡವು ಫೈನಲ್ ಪಂದ್ಯದಲ್ಲಿ ಈಸ್ಟೋನಿಯಾದ ಲಿಸ್ಸೆಲ್ ಜಾತ್ಮಾ, ಮೀರಿ ಮರಿಟಾ ಪಾಸ್ ಹಾಗೂ ಮಾರಸಿ ಟೇಟ್ಸ್‌ಮನ್ ಅವರಿದ್ದ ತಂಡದ ವಿರುದ್ಧ 232–229 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿತು.
ಈ ಋತುವಿನಲ್ಲಿ ಭಾರತೀಯ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಶಾಂಘೈ ಹಾಗೂ ಯಚಾನ್‌ನಲ್ಲಿ ಕಳೆದ ಏಪ್ರಿಲ್ ಹಾಗೂ ಮೇನಲ್ಲಿ ಕ್ರಮವಾಗಿ ನಡೆದ ವಿಶ್ವಕಪ್‌ನ ಮೊದಲ ಎರಡೂ ಹಂತಗಳಲ್ಲಿ ಚಿನ್ನದ ಪದಕ ಜಯಿಸಿದೆ.
ಮತ್ತೊಂದೆಡೆ ಭಾರತೀಯ ಪುರುಷರ ಆರ್ಚರಿ ವಿಭಾಗದ ಪ್ರಿಯಾಂಶ್ ಅವರು ಕಂಚಿನ ಪದಕಕ್ಕಾಗಿ ಇಂದು (ಶನಿವಾರ) ಸಂಜೆ ಹೋರಾಡಲಿದ್ದಾರೆ. ರಿಕರ್ವ್ ವಿಭಾಗದಲ್ಲಿ ಅಂಕಿತಾ ಭಕತ್ ಹಾಗೂ ಧೀರಜ್ ಬೊಮ್ಮದೇವರ ಅವರೂ ತಮ್ಮ ವೈಯಕ್ತಿಕ ವಿಭಾಗಗಳಲ್ಲಿ ಸೆಮಿಫೈನಲ್ ಹಂತ ತಲುಪಿದ್ದು ಪದಕಗಳ ನಿರೀಕ್ಷೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.