ಹಾಂಗ್‌ಝೌ: ಭಾರತ ಮಹಿಳಾ ಕಬಡ್ಡಿ ತಂಡದವರು ಏಷ್ಯನ್ ಕ್ರೀಡಾಕೂಟದ ತಮ್ಮ ಮೊದಲ ಪಂದ್ಯದಲ್ಲಿ ಚೀನಾ ತೈಪೆ ಜತೆ 34–34 ರಿಂದ ಅನಿರೀಕ್ಷಿತ ಡ್ರಾ ಮಾಡಿಕೊಂಡರು.
ಗೆಲುವಿನ ನೆಚ್ಚಿನ ತಂಡ ಎನಿಸಿಕೊಂಡಿದ್ದ ಭಾರತಕ್ಕೆ ಪಂದ್ಯದುದ್ದಕ್ಕೂ ಸ್ಫೂರ್ತಿಯುತ ಪ್ರತಿರೋಧ ಒಡ್ಡಿದ ತೈಪೆ ತಂಡ, ಕೊನೆಯ ರೇಡ್‌ನಲ್ಲಿ ಬೋನಸ್ ಅಂಕ ಗಿಟ್ಟಿಸಿ ಡ್ರಾ ಸಾಧಿಸಿತು.
ಮಹಿಳಾ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಕೊರಿಯಾ ವಿರುದ್ಧ ಪೈಪೋಟಿ ನಡೆಸಲಿದೆ. ಪುರುಷರ ತಂಡದವರು ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುವ ಮೂಲಕ ಪದಕದೆಡೆಗಿನ ಅಭಿಯಾನ ಆರಂಭಿಸಲಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ರಿತು ನೇಗಿ, ಪೂಜಾ ಹತ್ವಾಲ ಮತ್ತು ನಿಧಿ ಉತ್ತಮ ಪ್ರದರ್ಶನ ನೀಡಿದರು. ಎದುರಾಳಿ ತಂಡದ ಡಿಫೆಂಡರ್ ಸಿಯು–ಚೆನ್ ಫೆಂಗ್ ಅವರು ಗಮನ ಸೆಳೆದರು.
ವಿರಾಮದ ವೇಳೆಗೆ ಚೀನಾ ತೈಪೆ ತಂಡ 17–15 ರಿಂದ ಮುನ್ನಡೆಯಲ್ಲಿತ್ತು. ಮರುಹೋರಾಟ ನಡೆಸಿದ ಭಾರತ, 23–17 ಹಾಗೂ 26–20 ರಿಂದ ಮೇಲುಗೈ ಸಾಧಿಸಿತು. ಆದರೆ ಕೊನೆಯಲ್ಲಿ ಪುಟಿದೆದ್ದು ನಿಂತ ಚೀನಾ ತೈಪೆ ತಂಡ ಸಮಬಲ ಸಾಧಿಸುವಲ್ಲಿ ಯಶ ಕಂಡಿತು.
‘ಈ ಪಂದ್ಯದಲ್ಲಿ ನಮ್ಮ ಆಟಗಾರ್ತಿಯರು ಅಲ್ಪ ನರ್ವಸ್ ಆಗಿದ್ದರು. ಮುಂದಿನ ಪಂದ್ಯಗಳಲ್ಲಿ ಚೇತರಿಕೆಯ ಪ್ರದರ್ಶನ ನೀಡಲಿದ್ದೇವೆ. ಇಲ್ಲಿ ಚಿನ್ನ ಗೆಲ್ಲುವುದು ನಮ್ಮ ಗುರಿ’ ಎಂದು ಭಾರತ ತಂಡದ ಅಧಿಕಾರಿ ವಿ.ತೇಜಸ್ವಿನಿ ಬಾಯಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.