ಜಕಾರ್ತ: ಭಾರತದ ಮಹಿಳಾ ಹಾಕಿ ತಂಡದವರು ಏಷ್ಯನ್ ಕ್ರೀಡಾಕೂಟದಲ್ಲಿ 36 ವರ್ಷಗಳ ನಂತರ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಕನಸಿನಲ್ಲಿದ್ದಾರೆ.
ಶುಕ್ರವಾರ ನಡೆಯುವ ಫೈನಲ್‌ನಲ್ಲಿ ರಾಣಿ ರಾಂಪಾಲ್ ಬಳಗ ಜಪಾನ್ ಸವಾಲು ಎದುರಿಸಲಿದೆ.
ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ 1–0 ಗೋಲಿನಿಂದ ಚೀನಾವನ್ನು ಮಣಿಸಿತ್ತು. ಇದರೊಂದಿಗೆ 20 ವರ್ಷಗಳ ನಂತರ ಏಷ್ಯನ್ ಕೂಟದಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. 1982ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ ಭಾರತ ಚಿನ್ನ ಗೆದ್ದಿತ್ತು.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ರಾಣಿ ಬಳಗ, ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನ ಹೊಂದಿರುವ ಜಪಾನ್ ತಂಡವನ್ನು ಸುಲಭವಾಗಿ ಮಣಿಸುವ ಆಲೋಚನೆ ಹೊಂದಿದೆ.
ಈ ಬಾರಿಯ ಕೂಟದ ಗುಂಪು ಹಂತದಲ್ಲಿ ರಾಣಿ ಪಡೆ ಇಂಡೊನೇಷ್ಯಾ (8–0), ಕಜಕಸ್ತಾನ (21–0), ದಕ್ಷಿಣ ಕೊರಿಯಾ (4–1) ಮತ್ತು ಥಾಯ್ಲೆಂಡ್ (5–0) ತಂಡಗಳನ್ನು ಸೋಲಿಸಿ ಅಜೇಯವಾಗಿ ನಾಲ್ಕರ ಘಟ್ಟ ಪ್ರವೇಶಿಸಿತ್ತು.
ಭಾರತದ ವನಿತೆಯರು ರಕ್ಷಣಾ ವಿಭಾಗದಲ್ಲಿ ಬಲಿಷ್ಠರಾಗಿದ್ದಾರೆ. ಈ ಬಾರಿ ಎದುರಾಳಿಗಳಿಗೆ ಕೇವಲ ಒಂದು ಗೋಲು ಬಿಟ್ಟುಕೊಟ್ಟಿರುವುದು ಇದಕ್ಕೆ ಸಾಕ್ಷಿ.
ದೀಪ್ ಗ್ರೇಸ್ ಎಕ್ಕಾ, ದೀಪಿಕಾ, ಗುರ್ಜೀತ್ ಕೌರ್, ಸುನಿತಾ ಲಾಕ್ರಾ ಮತ್ತು ರೀನಾ ಕೋಕರ್ ಅವರು ತಂಡದ ಶಕ್ತಿಯಾಗಿದ್ದಾರೆ.
ಮುಂಚೂಣಿ ವಿಭಾಗದಲ್ಲಿ ಆಡುವ ವಂದನಾ ಕಟಾರಿಯಾ ಮತ್ತು ರಾಣಿ ಅವರು ಜಪಾನ್ ವಿರುದ್ಧವೂ ಕೈಚಳಕ ತೋರಲು ಕಾತರರಾಗಿದ್ದಾರೆ.
‘2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸುವುದು ನಮ್ಮ ಕನಸು. ಇದಕ್ಕಾಗಿ ಜಪಾನ್ ವಿರುದ್ಧ ಗೆಲ್ಲುವುದು ಅಗತ್ಯ. ಜಪಾನ್ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಮಗಿಂತಲೂ ಕೆಳಗಿನ ಸ್ಥಾನದಲ್ಲಿದೆ. ಹಾಗಂತ ಎದುರಾಳಿಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ’ ಎಂದು ನಾಯಕಿ ರಾಣಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.