ನವದೆಹಲಿ: ಹಾಕಿ ಇಂಡಿಯಾ (ಎಚ್‌ಐ), ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಗೌರವಕ್ಕೆ ಭಾರತ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಅವರ ಹೆಸರನ್ನು ಮಂಗಳವಾರ ಶಿಫಾರಸು ಮಾಡಿದೆ.
ವಂದನಾ ಕಟಾರಿಯಾ, ಮೋನಿಕಾ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಜೀವಮಾನ ಸಾಧನೆಗಾಗಿ ನೀಡುವ ಮೇಜರ್ ಧ್ಯಾನ್‌ಚಂದ್ ಪುರಸ್ಕಾರಕ್ಕೆ ಹಿರಿಯ ಆಟಗಾರರಾದ ಆರ್.ಪಿ.ಸಿಂಗ್ ಹಾಗೂ ತುಷಾರ್ ಖಾಂಡ್ಕರ್, ದ್ರೋಣಾಚಾರ್ಯ ಪ್ರಶಸ್ತಿಗೆ ಕೋಚ್‌ಗಳಾದ ಬಿ.ಜೆ.ಕಾರ್ಯಪ್ಪ ಹಾಗೂ ರೋಮೇಶ್ ಪಠಾಣಿಯಾ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.
2016ರ ಜನವರಿ 1ರಿಂದ 2019ರ ಡಿಸೆಂಬರ್ 31ರ ಅವಧಿಯಲ್ಲಿ ಕ್ರೀಡಾಪಟುಗಳು ತೋರಿದ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಅವರ ಹೆಸರುಗಳನ್ನು ಖೇಲ್ ರತ್ನ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ.
ಈ ಅವಧಿಯಲ್ಲಿ ರಾಣಿ ಅಮೋಘ ಸಾಧನೆ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ತಂಡವು 2017ರ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸಿ ಹೊಸ ಮೈಲುಗಲ್ಲು ಸ್ಥಾಪಿಸಿತ್ತು. 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದಿತ್ತು. ಜೊತೆಗೆ ಎಫ್‌ಐಎಚ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ತಂಡವು ಒಂಬತ್ತನೇ ಸ್ಥಾನಕ್ಕೇರಿದ ಸಾಧನೆ ಮಾಡಿತ್ತು. ಭಾರತ ತಂಡವು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ ರಾಣಿ ಅವರ ಪಾತ್ರ ಮಹತ್ವದ್ದಾಗಿತ್ತು.
‘ವರ್ಲ್ಡ್ ಗೇಮ್ಸ್ ಅಥ್ಲೀಟ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದ ಭಾರತದ ಮೊಟ್ಟಮೊದಲ ಕ್ರೀಡಾಪಟು ಎಂಬ ಹಿರಿಮೆ ಹೊಂದಿರುವ ರಾಣಿ ಅವರಿಗೆ 2016ರಲ್ಲಿ ಅರ್ಜುನ ಪ್ರಶಸ್ತಿ ಒಲಿದಿತ್ತು. ಈ ವರ್ಷ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಸ್ಟ್ರೈಕರ್ ವಂದನಾ ಮತ್ತು ಮೋನಿಕಾ ಅವರು ಕ್ರಮವಾಗಿ 200 ಮತ್ತು 150 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
ಹೋದ ವರ್ಷ ನಡೆದಿದ್ದ ಎಫ್‌ಐಎಚ್ ಸೀರಿಸ್ ಫೈನಲ್ಸ್, ಈ ವರ್ಷದ ಆರಂಭದಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಹಾಗೂ ಭುವನೇಶ್ವರದಲ್ಲಿ ಆಯೋಜನೆಯಾಗಿದ್ದ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಇವರು ಅಮೋಘ ಸಾಮರ್ಥ್ಯ ತೋರಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.
ಡ್ರ್ಯಾಗ್‌ಫ್ಲಿಕ್ ಪರಿಣತ ಆಟಗಾರ ಹರ್ಮನ್‌ಪ್ರೀತ್ ಅವರು ಪುರುಷರ ತಂಡದ ಬೆನ್ನೆಲುಬಾಗಿದ್ದಾರೆ.2020ರ ಒಲಿಂಪಿಕ್ ಟೆಸ್ಟ್ ಟೂರ್ನಿಯಲ್ಲಿ ಅವರು ಭಾರತ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಒಡಿಶಾದಲ್ಲಿ ನಡೆದಿದ್ದ ಎಫ್‌ಐಎಚ್ ಸೀರಿಸ್ ಫೈನಲ್ಸ್ ಟೂರ್ನಿಯಲ್ಲೂ ಅಮೋಘ ಆಟ ಆಡಿ ಗಮನ ಸೆಳೆದಿದ್ದರು.
2019ರ ಸುಲ್ತಾನ್ ಜೋಹರ್ ಕಪ್ ಟೂರ್ನಿಯಲ್ಲಿ ಭಾರತದ ಜೂನಿಯರ್ ಪುರುಷರ ತಂಡದವರು ಬೆಳ್ಳಿಯ ಪದಕ ಜಯಿಸಿದ್ದರು. ಆಗ ಕಾರ್ಯಪ್ಪ ಅವರು ತಂಡದ ಕೋಚ್ ಆಗಿದ್ದರು.
‘ರಾಣಿ ಅವರು ಮಹಿಳಾ ಹಾಕಿಯಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಖೇಲ್ ರತ್ನ ಗೌರವಕ್ಕೆ ಅವರು ಅರ್ಹರಾಗಿದ್ದಾರೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್ ಮುಷ್ತಾಕ್ ಅಹಮದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.