ನವದೆಹಲಿ: ಭಾರತದ ಕುಸ್ತಿಗೆ ವಿಶ್ವಮಟ್ಟದಲ್ಲಿ ಹೆಸರು ಗಳಿಸಿಕೊಟ್ಟವರು ಸುಶೀಲ್ ಕುಮಾರ್. ಈಗ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರನ್ನು ಪೊಲೀಸರು ಹುಡುಕಾಡುತ್ತಿರುವುದರಿಂದಾಗಿ ಕುಸ್ತಿಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಭಿಪ್ರಾಯಪಟ್ಟಿದೆ.
2010ರಲ್ಲಿ ವಿಶ್ವ ಚಾಂಪಿಯನ್ ಆಗುವ ಮೂಲಕ ಈ ಸಾಧನೆ ಮಾಡಿದ ಭಾರತದ ಏಕೈಕ ಕುಸ್ತಿಪಟು ಎಂದೆನಿಸಿಕೊಂಡಿರುವ ಸುಶೀಲ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಅಪರೂಪದ ಸಾಧನೆಯನ್ನೂ ಮಾಡಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಗಳಿಸಿರುವ ಖ್ಯಾತಿ ಈಗ ಇಲ್ಲವಾಗಿದೆ ಎಂದು ಫೆಡರೇಷನ್ ಹೇಳಿದೆ.
‘ಸುಶೀಲ್ ಪ್ರಕರಣದಿಂದಾಗಿ ಭಾರತ ಕುಸ್ತಿಗೆ ಕೆಟ್ಟ ಹೆಸರು ಬಂದಿರುವುದು ನಿಜ. ಆದರೆ ಕುಸ್ತಿಪಟುಗಳ ಅಂಗಣದ ಹೊರಗಿನ ಚಟುವಟಿಕೆಯನ್ನು ನಿಯಂತ್ರಿಸಲು ನಮಗೆ ಸಾಧ್ಯವಿಲ್ಲ. ಅವರು ಕ್ರೀಡೆಯಲ್ಲಿ ಮಾಡುವ ಸಾಧನೆಯ ಮೇಲಷ್ಟೇ ಕಣ್ಣಿಡಲು ಸಾಧ್ಯ’ ಎಂದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗಳಿಸುವುದರೊಂದಿಗೆ ಕುಸ್ತಿಯಲ್ಲಿ ಪದಕ ಗೆಲ್ಲುವ 56 ವರ್ಷಗಳ ಭಾರತದ ಕನಸನ್ನು ಸುಶೀಲ್ ಕುಮಾರ್ ನನಸು ಮಾಡಿದ್ದರು. ಇದರ ನಂತರ ಭಾರತ ಕುಸ್ತಿಯ ಹೊಸ ಶಕೆ ಆರಂಭವಾಗಿತ್ತು. ಯೋಗೇಶ್ವರ್ ದತ್, ಗೀತಾ ಪೋಗಟ್, ಬಬಿತಾ ಪೋಗಟ್, ವಿನೇಶ ಪೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ, ರವಿ ದಹಿಯಾ ಮತ್ತು ದೀಪಕ್ ಪೂನಿಯಾ ಅವರು ಹೆಸರು ಮಾಡಿದರು.
ಈ ತಿಂಗಳ ನಾಲ್ಕರಂದು ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಗಲಾಟೆಯಲ್ಲಿ 23 ವರ್ಷದ ಕುಸ್ತಿಪಟು ಸಾಗರ್ ರಾಣಾ ಸಾವಿಗೀಡಾಗಿದ್ದರು. ಇದರಲ್ಲಿ ಸುಶೀಲ್ ಕುಮಾರ್ ಭಾಗಿಯಾಗಿದ್ದಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ. ಪೊಲೀಸರು ಸೋಮವಾರ ‘ಲುಕ್ ಔಟ್’ ನೋಟಿಸ್ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.