ADVERTISEMENT

ಒಲಿಂಪಿಕ್ಸ್‌ ಅರ್ಹತಾ ಟೂರ್ನಿ: ಭಾರತದ ಲಕ್ಷ್ಯ ಚಾಹರ್‌ಗೆ ಸೋಲು

ಪಿಟಿಐ
Published 5 ಮಾರ್ಚ್ 2024, 13:32 IST
Last Updated 5 ಮಾರ್ಚ್ 2024, 13:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬುಸ್ಟೊ ಅರ್ಸಿಝಿಯೊ (ಇಟಲಿ): ಹಾಲಿ ರಾಷ್ಟ್ರೀಯ ಚಾಂಪಿಯನ್ ಲಕ್ಷ್ಯ ಚಾಹರ್ ಅವರು ಪ್ರಥಮ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್‌ ಕ್ವಾಲಿಫೈಯರ್ಸ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದ ಭಾರತದ ಐದನೇ ಬಾಕ್ಸರ್ ಎನಿಸಿದರು. ಅವರು ಸೋಮವಾರ ತಡರಾತ್ರಿ ಇರಾನ್‌ನ ಘೆಶ್ಲಾಗಿ ಮೇಸಮ್ ಎದುರು ನಡೆದ ಸೆಣಸಾಟದ ಮೂರನೇ ಸುತ್ತಿನಲ್ಲಿ ಹೊರಬಿದ್ದರು. ಆ ಮೂಲಕ ಭಾರತದ ವೈಫಲ್ಯದ ಸರಮಾಲೆ ಮುಂದುವರಿಯಿತು.

ಘೆಶ್ಲಾಗಿ ಅವರು 2021ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಮೊದಲ ಸುತ್ತಿನಲ್ಲಿ 2–3 ರಿಂದ ಸೋತ ಲಕ್ಷ್ಯ, ಎರಡನೇ ಸುತ್ತನ್ನು 3–2 ರಿಂದ ಜಯಿಸಿದರು. ಆದರೆ ಮೂರನೇ ಸುತ್ತಿನಲ್ಲಿ ನಾಕ್‌ಔಟ್‌ ಆಧಾರದಲ್ಲಿ ಸೋತರು.

ಭಾರತದ ಎಲ್ಲಾ ನಾಲ್ಕೂ ಮಂದಿ ಎರಡನೇ ಸುತ್ತು ತಲುಪಲು ವಿಫಲರಾದಂತಾಗಿದೆ. ದೀಪಕ್ ಬೋರಿಯಾ (51 ಕೆ.ಜಿ), ನರೇಂದರ್‌ ಬೆರ್ವಾಲ್ (+92 ಕೆ.ಜಿ), ಜಾಸ್ಮಿನ್ ಲಂಬೋರಿಯಾ (60 ಕೆ.ಜಿ) ಇತರ ಮೂವರು.

ADVERTISEMENT

ಭಾರತದ ಇನ್ನೂ ಐದು ಮಂದಿ ಇಲ್ಲಿ ಕಣದಲ್ಲಿದ್ದಾರೆ. ಈ ಅರ್ಹತಾ ಟೂರ್ನಿಯ ಸೆಮಿಫೈನಲ್ ತಲುಪಿದರೂ ಒಲಿಂಪಿಕ್‌ ಕೋಟಾ ದೊರೆಯಲಿದೆ. ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಮೊಹಮ್ಮದ್ ಹುಸಾಮುದ್ದೀನ್, ಆರು ಬಾರಿಯ ಏಷ್ಯನ್ ಪದಕ ವಿಜೇತ ಶಿವ ಘಾಪಾ ಈ ಐವರಲ್ಲಿ ಒಳಗೊಂಡಿದ್ದಾರೆ.

ನಿಖತ್ ಝರೀನ್ (50 ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ), ಪ್ರವೀಣ್ ಹೂಡ (57 ಕೆ.ಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ) ಅವರು ಕಳೆದ ವರ್ಷದ ಏಷ್ಯನ್ ಗೇಮ್ಸ್‌ನಲ್ಲಿ ತೋರಿದ ಪ್ರದರ್ಶನದ ಆಧಾರದಲ್ಲಿ ಪ್ಯಾರಿಸ್‌ಗೆ ಟಿಕೆಟ್‌ ಪಡೆದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 9 ಮಂದಿ ಬಾಕ್ಸರ್‌ಗಳು ಪಾಲ್ಗೊಂಡಿದ್ದರು.

ಇಲ್ಲಿ ವಿಫಲರಾದ ಬಾಕ್ಸರ್‌ಗಳು ಬ್ಯಾಂಕಾಕ್‌ನಲ್ಲಿ ಮೇ 23 ರಿಂದ ಜೂನ್ 3ರವರೆಗೆ ನಡೆಯಲಿರುವ ಎರಡನೇ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್‌ ಅರ್ಹತಾ ಟೂರ್ನಿಯ ಮೂಲಕ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆಯುವ ಕೊನೆಯ ಅವಕಾಶ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.