ಬರ್ಮಿಂಗ್‌ಹ್ಯಾಮ್: ಭಾರತದ ತಾರೆ ಲಕ್ಷ್ಯ ಸೇನ್ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಅಮೋಘ ಪ್ರದರ್ಶನದ ನೀಡಿದ 22 ವರ್ಷದ ಲಕ್ಷ್ಯ ಸೇನ್, ಮಾಜಿ ಚಾಂಪಿಯನ್ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 20-22, 21-16, 21-19ರ ಕಠಿಣ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರು 2022ರ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿದ್ದರು.
ಮೊದಲ ಸೆಟ್ ಕಳೆದುಕೊಂಡರೂ ಛಲ ಬಿಡದ ಲಕ್ಷ್ಯ ಸೇನ್, 71 ನಿಮಿಷಗಳ ಕಾಲ ದಿಟ್ಟ ಹೋರಾಟ ಪ್ರದರ್ಶಿಸುವ ಮೂಲಕ ಪಂದ್ಯವನ್ನು ವಶಪಡಿಸಿಕೊಂಡರು.
ವಿಶ್ವ ನಂ.18ನೇ ರ್‍ಯಾಂಕ್‌ನ ಸೆನ್ ಅವರು ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ವಿಶ್ವ ನಂ.9 ಆಟಗಾರ ಜೊನಾಥನ್ ಕ್ರಿಸ್ಟಿ ಸವಾಲನ್ನು ಎದುರಿಸಲಿದ್ದಾರೆ.
'ನಿಜಕ್ಕೂ ಈ ಪಂದ್ಯದ ಫಲಿತಾಂಶ ಖುಷಿ ನೀಡಿದೆ. ಕೊನೆಯ ಹಂತದವರೆಗೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಚಿಕ್ಕ ತಪ್ಪು ಮಾಡಿದರೂ ಎದುರಾಳಿ ತಿರುಗೇಟು ನೀಡಬಲ್ಲ ಎಂಬುದನ್ನು ಅರಿತುಕೊಂಡಿದ್ದೆ. ಹಾಗಾಗಿ ಎದುರಾಳಿಗೆ ಅವಕಾಶ ನೀಡದೇ ಇರುವುದು ತುಂಬಾನೆ ಮಹತ್ವದೆನಿಸಿತು. ಮಾನಸಿಕ, ದೈಹಿಕವಾಗಿಯೂ ಈ ಪಂದ್ಯ ನನ್ನ ಪಾಲಿಗೆ ಉತ್ತಮವೆನಿಸಿತ್ತು' ಎಂದು ಸೆನ್ ವಿಜಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.