ADVERTISEMENT

ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು – ಯಮಗುಚಿ ಫೈನಲ್ ಫೈಟ್‌

ಎರಡನೇ ಶ್ರೇಯಾಂಕದ ಆಟಗಾರ್ತಿಗೆ ನಿರಾಸೆ

ಪಿಟಿಐ
Published 20 ಜುಲೈ 2019, 19:45 IST
Last Updated 20 ಜುಲೈ 2019, 19:45 IST
ಚೆನ್ ಯೂಫಿ ಅವರ ಶಾಟ್‌ ರಿಟರ್ನ್ ಮಾಡಲು ಮುಂದಾದ ಪಿ.ವಿ.ಸಿಂಧು –ಪಿಟಿಐ ಚಿತ್ರ
ಚೆನ್ ಯೂಫಿ ಅವರ ಶಾಟ್‌ ರಿಟರ್ನ್ ಮಾಡಲು ಮುಂದಾದ ಪಿ.ವಿ.ಸಿಂಧು –ಪಿಟಿಐ ಚಿತ್ರ   

ಜಕಾರ್ತ: ಎರಡನೇ ಶ್ರೇಯಾಂಕದ ಆಟಗಾರ್ತಿ, ಚೀನಾದ ಚೆನ್ ಯೂಫಿ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಪಿ.ವಿ.ಸಿಂಧು ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದರು.

ಶನಿವಾರ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು 21–19, 21–10ರ ಗೆಲುವು ತಮ್ಮದಾಗಿಸಿಕೊಂಡರು. ಈ ಮೂಲಕ ಈ ಋತುವಿನ ಮೊದಲ ಫೈನಲ್‌ ಪ್ರವೇಶಿಸಿ ಸಂಭ್ರಮಿಸಿದರು.

ಈ ಬಾರಿಯ ಟೂರ್ನಿಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲಾಗದೆ ಸಿಂಧು ನಿರಾಸೆಗೊಂಡಿದ್ದರು. ಆದರೆ ಶನಿವಾರ ಅಮೋಘ ಆಟದ ಮೂಲಕ ಗಮನ ಸೆಳೆದರು. ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಚೆನ್ ವಿರುದ್ಧ ಪೂರ್ಣ ಆಧಿಪತ್ಯ ಸ್ಥಾಪಿಸಿ ಸುಲಭವಾಗಿ ಗೆದ್ದರು. ಸಿಂಧು ಈಗ ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ADVERTISEMENT

ಆಸ್ಟ್ರೇಲಿಯಾ, ಸ್ವಿಸ್‌ ಮತ್ತು ಆಲ್‌ ಇಂಗ್ಲೆಂಡ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದು ಇಲ್ಲಿಗೆ ಬಂದಿದ್ದ ಚೆನ್‌ ಮೊದಲ ಗೇಮ್‌ನಲ್ಲಿ ಗೆದ್ದರು. ನಿಧಾನವಾಗಿ ಆಟಕ್ಕೆ ಹೊಂದಿಕೊಂಡ ಸಿಂಧು ನಂತರ ಎದುರಾಳಿಯನ್ನು ಕಂಗೆಡಿಸಿ 10–4ರ ಮುನ್ನಡೆ ಸಾಧಿಸಿದರು. ಒಂದು ಪಾಯಿಂಟ್‌ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದರು. ಗೇಮ್‌ನ ದ್ವಿತೀಯಾರ್ಧದಲ್ಲಿ ಮೋಹಕ ಡ್ರಾ‍ಪ್‌, ಬ್ಯಾಕ್‌ಹ್ಯಾಂಡ್ ಸ್ಮ್ಯಾಷ್‌ಗಳ ಮೂಲಕ ರಂಜಿಸಿದರು. ಕೊನೆಯ ಎಂಟು ಪಾಯಿಂಟ್‌ಗಳ ಪೈಕಿ ಏಳನ್ನು ಬುಟ್ಟಿಗೆ ಹಾಕಿಕೊಂಡರು. ಎರಡನೇ ಗೇಮ್‌ನಲ್ಲೂ ಆರಂಭದಲ್ಲಿ ಚೆನ್ 4–0 ಮುನ್ನಡೆ ಸಾಧಿಸಿದರು. ನಂತರ ಗೇಮ್ ಏಕಪಕ್ಷೀಯವಾಯಿತು.

ಯಮಗುಚಿ ವಿರುದ್ಧ ಫೈನಲ್ ಪಂದ್ಯ: ಫೈನಲ್ ಪಂದ್ಯದಲ್ಲಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಣಸುವರು. ಶನಿವಾರದ ಸೆಮಿಫೈನಲ್‌ನಲ್ಲಿ ಯಮಗುಚಿ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಆಟಗಾರ್ತಿ ತೈವಾನ್‌ನ ತಾಯ್‌ ಜು ಯಿಂಗ್ ಎದುರು 21–9, 21–15ರಲ್ಲಿ ಗೆದ್ದರು. ಯಮಗುಚಿ ವಿರುದ್ಧ ಸಿಂಧು ಈ ವರೆಗೆ ಒಟ್ಟು 14 ಪಂದ್ಯಗಳನ್ನು ಆಡಿದ್ದು 10ರಲ್ಲಿ ಗೆದ್ದಿದ್ದಾರೆ. ಇತ್ತೀಚಿನ ನಾಲ್ಕು ಪಂದ್ಯಗಳಲ್ಲೂ ಸಿಂಧು ವಿರುದ್ಧ ಯಮಗುಚಿ ಸೋತಿದ್ದಾರೆ.

ಫೈನಲ್ ಪಂದ್ಯ ಇಂದು

ಆರಂಭ: ಬೆಳಿಗ್ಗೆ 8.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.