ಜಕಾರ್ತ: ಉತ್ತಮ ಆಟ ಮುಂದುವರಿಸಿದ ಭಾರತದ ಎಚ್.ಎಸ್.ಪ್ರಣಯ್ ಅವರು ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 21–11, 21–18 ರಲ್ಲಿ ಹಾಂಗ್‌ಕಾಂಗ್‌ನ ಆಂಗಸ್ ಲಾಂಗ್ ಅವರನ್ನು ಮಣಿಸಿದರು.
ಎರಡನೇ ಸುತ್ತಿನಲ್ಲಿ ಭಾರತದ ಲಕ್ಷ್ಯ ಸೇನ್ ವಿರುದ್ಧ ಗೆಲುವು ಸಾಧಿಸಿದ್ದ ಪ್ರಣಯ್, ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಎದುರಾಳಿಯ ವಿರುದ್ಧ ಶಿಸ್ತಿನ ಆಟವಾಡಿದರು.
ಮೊದಲ ಗೇಮ್‌ನ ಆರಂಭದಲ್ಲೇ ಎದುರಾಳಿಯ ಮೇಲೆ ಒತ್ತಡ ಹೇರಿದ ಪ್ರಣಯ್, 11–3 ರ ಮುನ್ನಡೆ ಪಡೆದರು. ಈ ಹಂತದಲ್ಲಿ ಅವರು ಕೆಲವೊಂದು ಸ್ವಯಂಕೃತ ತಪ್ಪುಗಳನ್ನು ಮಾಡಿದ್ದರಿಂದ ಎದುರಾಳಿ ಒಂದಷ್ಟು ಪಾಯಿಂಟ್ ಗಳಿಸಿದರು. ಆದರೆ ವಿರಾಮದ ಬಳಿಕ ಯೋಜನಾಬದ್ಧ ಆಟವಾಡಿ ಗೇಮ್ ಗೆದ್ದರು.
ಎರಡನೇ ಗೇಮ್‌ನಲ್ಲಿ ಮರುಹೋರಾಟದ ಸೂಚನೆ ನೀಡಿದ ಲಾಂಗ್ 9–7ರಲ್ಲಿ ಅಲ್ಪ ಮೇಲುಗೈ ಸಾಧಿಸಿದರು. ಎಚ್ಚರಿಕೆಯ ಅಟವಾಡಿದ ಪ್ರಣಯ್, ಕ್ರಾಸ್ ಕೋರ್ಟ್ ಸ್ಮ್ಯಾಷ್‌ಗಳನ್ನು ಸಿಡಿಸಿ ಮೇಲಿಂದ ಮೇಲೆ ಪಾಯಿಂಟ್ ಕಲೆಹಾಕಿದರು.ಸಮೀರ್ ವರ್ಮಾಗೆ ಸೋಲು: ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಭಾರತದ ಇನ್ನೊಬ್ಬ ಆಟಗಾರ ಸಮೀರ್ ವರ್ಮಾ ಎರಡನೇ ಸುತ್ತಿನಲ್ಲಿ 10–21, 13–21 ರಲ್ಲಿ ಮಲೇಷ್ಯಾದ ಲೀ ಜೀ ಜಿಯಾ ಎದುರು ಸೋತರು. ಲೀ ವಿರುದ್ಧದ ಏಳು ಹಣಾಹಣಿಗಳಲ್ಲಿ ಸಮೀರ್‌ಗೆ ಎದುರಾದ ಐದನೇ ಸೋಲು ಇದು. ಈ ಪಂದ್ಯ 43 ನಿಮಿಷಗಳಲ್ಲಿ ಕೊನೆಗೊಂಡಿತು.
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ ಕೂಡಾ ಸೋಲು ಅನುಭವಿಸಿತು. ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಚೀನಾದ ಚೆನ್ ಕ್ವಿಂಗ್ ಮತ್ತು ಜಿಯಾ ಯಿಫಾನ್ ಅವರು 21–16, 21–13 ರಲ್ಲಿ ಭಾರತದ ಜೋಡಿಗೆ ಸೋಲುಣಿಸಿತು.
ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಭಾರತದ ಎಂ.ಆರ್.ಅರ್ಜುನ್ ಮತ್ತು ಧ್ರುವ್ ಕಪಿಲಾ ಅವರು 19–21, 15–21 ರಲ್ಲಿ ಚೀನಾದ ಚೆನ್ ಯು ಲಿಯು– ಯಿ ಯು ಕ್ಸುವಾನ್ ಎದುರು ಸೋತು ಹೊರಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.