ಒಡೆನ್ಸ್, ಡೆನ್ಮಾರ್ಕ್ : ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ ಎಸ್.ಎಸ್. ಪ್ರಣಯ್ ಅವರು ಬೆನ್ನುನೋವಿನಿಂದ ಬಳಲುತ್ತಿದ್ದು, ಮಂಗಳವಾರ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯಿಂದ ಅವರು ಹಿಂದೆ ಸರಿದಿದ್ದಾರೆ.
31 ವರ್ಷದ ಪ್ರಣಯ್ ಅವರು ಬೆನ್ನುನೋವನ್ನು ಲೆಕ್ಕಿಸದೆ ಏಷ್ಯನ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 41 ವರ್ಷದ ಬಳಿಕ ಭಾರತಕ್ಕೆ ಪದಕ ತಂದುಕೊಟ್ಟಿದ್ದರು.
‘ಈ ತಿಂಗಳು ನಡೆಯುವ ಟೂರ್ನಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಎರಡು– ಮೂರು ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಓಪನ್ ಟೂರ್ನಿಯಲ್ಲಿ ಆಡುತ್ತಿಲ್ಲ’ ಎಂದು ಪಿಟಿಐಗೆ ಅವರು ತಿಳಿಸಿದ್ದಾರೆ.
ಪ್ರಣಯ್ ಅವರ ಅನುಪಸ್ಥಿತಿಯಲ್ಲಿ ಲಕ್ಷ್ಮಸೇನ್ ಅವರು ಡೆನ್ಮಾರ್ಕ್ ಓಪನ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ತಂಡ ವಿಭಾಗದ ಸ್ಪರ್ಧೆಯಲ್ಲಿ ಭಾರತವು ಬೆಳ್ಳಿ ಪದಕ ಜಯಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ವಿಶ್ವದ 15ನೇ ಕ್ರಮಾಂಕದ ಸೇನ್ ಅವರು ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಕಾಂತಾಫೋನ್ ವಾಂಗ್‌ಚರೊಯೆನ್ ಅವರನ್ನು ಎದುರಿಸಲಿದ್ದಾರೆ.
ಕಳೆದ ವಾರ ಆರಂಭಗೊಂಡ ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತ ತಲುಪಿ, ಅಲ್ಲಿ ನಿರಾಸೆ ಅನುಭವಿಸಿದ ಪಿ.ವಿ. ಸಿಂಧು ಅವರು ಇಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಕಿರ್ಸ್ಟಿ ಗಿಲ್ಮೊರ್ ಅವರ ಸವಾಲನ್ನು ಎದುರಿಸುವರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ವಿಶ್ವದ 20ನೇ ರ‍್ಯಾಂಕ್‌ನ ಕಿದಂಬಿ ಶ್ರೀಕಾಂತ್ ಅವರು ಇಲ್ಲಿ ಶ್ರೇಯಾಂಕ ಉತ್ತಮಪಡಿಸಲು ಪ್ರಯತ್ನಿಸಲಿದ್ದಾರೆ. ಆರಂಭಿಕ ಸುತ್ತಿನಲ್ಲಿ ಅವರು ಚೀನಾದ ವೆಂಗ್ ಹಾಂಗ್ ಯಾಂಗ್ ಅವರೊಂದಿಗೆ ಸೆಣಸಾಡುವರು.
30ನೇ ಕ್ರಮಾಂಕದ ಪ್ರಿಯಾಂಶು ರಾಜಾವತ್ ಅವರು ಆರ್ಕಟಿಕ್ ಓಪನ್ ಚಾಂಪಿಯನ್ 14ನೇ ಕ್ರಮಾಂಕದ ಲೀ ಝಿ ಜಿಯಾ (ಮಲೇಷ್ಯಾ) ಅವರನ್ನು ಎದುರಿಸುವರು.
ಪುರುಷರ ಡಬಲ್ಸ್‌ನ ವಿಶ್ವದ ಅಗ್ರ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೋ ಈ ಯಿ ಅವರ ವಿರುದ್ಧ ಸೆಣಸಾಡಲಿದೆ. ಭಾರತದ ಈ ಜೋಡಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿ ಇತಿಹಾಸ ನಿರ್ಮಿಸಿತ್ತು.
ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಥಾಯ್ಲೆಂಡ್‌ನ ಬೆನ್ಯಾಪಾ ಐಮ್‌ಸಾರ್ಡ್ ಮತ್ತು ನುಂಟಕರ್ನ್ ಐಮ್‌ಸಾರ್ಡ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.