ನವದೆಹಲಿ: ಮುಂದಿನ ವರ್ಷ ಟೋಕಿಯೊದಲ್ಲಿ ನಡೆಸಲು ಉದ್ದೇಶಿಸಿರುವ ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಐನಾಕ್ಸ್ ಗ್ರೂಪ್ ಪ್ರಾಯೋಜಿಸಲಿದೆ. ಭಾರತ ಒಲಿಂಪಿಕ್ಸ್ ಸಂಸ್ಥೆ ಗುರುವಾರ ಈ ವಿಷಯವನ್ನು ತಿಳಿಸಿದೆ.
ಈ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಕೂಟವನ್ನು ಕೊರೊನಾ ಹಾವಳಿಯಿಂದಾಗಿ ಒಂದು ವರ್ಷ ಮುಂದೂಡಲಾಗಿದೆ. 2021ರ ಜುಲೈ 23ರಿಂದ ಆಗಸ್ಟ್ ಎಂಟರ ವರೆಗೆ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಸಹಭಾಗಿತ್ವದ ಅಂಗವಾಗಿ ಭಾರತ ತಂಡಕ್ಕೆ ಸಂಬಂಧಿಸಿದ ಪ್ರಚಾರ ಕಾರ್ಯಕ್ರಮಗಳನ್ನೂ ಐನಾಕ್ಸ್ ಆಯೋಜಿಸಲಿದೆ. ಐನಾಕ್ಸ್ ಗುಂಪಿನ ಮನರಂಜನಾ ಕಂಪನಿಯಾದ ಐನಾಕ್ಸ್ ಲೇಸ್ಯುರ್ ಲಿಮಿಟೆಡ್‌ದೇಶದಾದ್ಯಂತ ಇರುವ ಮಲ್ಟಿಪ್ಲೆಕ್ಸ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದೆ.
‘ಭಾರತದ ಸರ್ವತೋಮುಖ ಬೆಳವಣಿಗೆಯಲ್ಲಿ ಭಾಗಿಯಾಗಬೇಕು ಎಂಬುದು ಐನಾಕ್ಸ್ ಗುಂಪಿನ ಧ್ಯೇಯಗಳಲ್ಲಿ ಒಂದು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಪ್ರಾಯೋಜಕತ್ವದ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ. ಭಾರತ ಒಲಿಂಪಿಕ್ಸ್ ಸಂಸ್ಥೆಯ ಜೊತೆ ಈ ಕುರಿತು ಒಪ್ಪಂದ ಮಾಡಿಕೊಂಡಿರುವ ಈ ದಿನ ನಮ್ಮ ಪಾಲಿಗೆ ಮಹತ್ವದ್ದು’ ಎಂದು ಐನಾಕ್ಸ್ ಗುಂಪಿನ ನಿರ್ದೇಶಕ ಸಿದ್ಧಾರ್ಥ ಜೈನ್ ಅಭಿಪ್ರಾಯಪಟ್ಟರು.
‘ಐನಾಕ್ಸ್ ಜೊತೆಗಿನ ಸಹಭಾಗಿತ್ವವನ್ನು ಘೋಷಿಸಲು ಸಂತಸವಾಗುತ್ತಿದೆ. ಇದರಿಂದ ದೇಶದ ಕ್ರೀಡಾಪಟುಗಳಿಗೂ ಕ್ರೀಡಾ ಸಂಸ್ಥೆಗಳಿಗೂ ಅನುಕೂಲ ಆಗಲಿದೆ. ಕೋವಿಡ್–19ರಿಂದಾಗಿ ಉಂಟಾಗಿರುವ ವಿಷಮ ಸ್ಥಿತಿಯಲ್ಲೂ ತಂಡದ ಪ್ರಾಯೋಜಕತ್ವ ವಹಿಸಲು ಮುಂದಾಗಿರುವುದು ಶ್ಲಾಘನೀಯ’ ಎಂದು ಭಾರತ ಒಲಿಂಪಿಕ್ಸ್ ಸಂಸ್ಥೆಯ ಮಹಾಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದರು.
ಫುಟ್‌ಬಾಲ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಓಟ, ಬ್ಯಾಸ್ಕೆಟ್‌ಬಾಲ್ ಮತ್ತು ಕ್ರಿಕೆಟ್‌ಗೆ ಸಂಬಂಧಿಸಿದ ವಿವಿಧ ತಂಡಗಳು, ಲೀಗ್‌ಗಳು ಹಾಗೂ ಟೂರ್ನಿಗಳ ಪ್ರಾಯೋಜಕತ್ವವನ್ನು ಈ ಹಿಂದೆ ಐನಾಕ್ಸ್ ವಹಿಸಿದೆ. ವೈವಿಧ್ಯಮಯ ಪ್ರಚಾರ ಕಾರ್ಯಕ್ರಮಗಳ ಮೂಲಕ ಕ್ರೀಡೆಯ ಕುರಿತು ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದೆ.
‘ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಹೊಸ ಎತ್ತರಕ್ಕೆ ಬೆಳೆಯುವುದನ್ನು ಕಾಣಲು ನಾವು ಖಾತರರಾಗಿದ್ದೇವೆ’ ಎಂದು ಸಿದ್ಧಾರ್ಥ ಜೈನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.