ADVERTISEMENT

ಅಂತರ ರಾಜ್ಯ ಅಥ್ಲೆಟಿಕ್ಸ್: ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದ ಜೆಸ್ಸಿ ಸಂದೇಶ್

ಪಿಟಿಐ
Published 17 ಜೂನ್ 2023, 17:57 IST
Last Updated 17 ಜೂನ್ 2023, 17:57 IST
ಜೆಸ್ಸಿ ಸಂದೇಶ್
ಜೆಸ್ಸಿ ಸಂದೇಶ್   

ಭುವನೇಶ್ವರ: ಮಹಾರಾಷ್ಟ್ರದ ಸರ್ವೇಶ್ ಕುಶಾರೆ ಮತ್ತು ಕರ್ನಾಟಕದ ಜೆಸ್ಸಿ ಸಂದೇಶ್ ಅವರು ಹೈಜಂಪ್‌ನಲ್ಲಿ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡು ಸಂಭ್ರಮಿಸಿದರು. 62ನೇ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮೂರನೇ ದಿನ 100 ಮೀ. ಹರ್ಡಲ್ಸ್‌ನಲ್ಲಿ ಆಂಧ್ರ ಪ್ರದೇಶದ ಓಟಗಾರ್ತಿ ಜ್ಯೋತಿ ಯೆರ‍್ರಾಜಿ ಸಹ ಚಿನ್ನ ಗೆಲ್ಲುವ ಹಾದಿಯಲ್ಲಿ ಹಾಂಗ್‌ ಜೌನ ಕ್ರೀಡಾಕೂಟಕ್ಕೆ ಆಯ್ಕೆಯಾದರು.

ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೈಜಂಪ್‌ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಸರ್ವೇಶ್ ಅನಿಲ್‌ ಕುಶಾರೆ 2.24 ಮೀ. ಎತ್ತರ ಜಿಗಿದರು. ಅವರಿಗೆ ಸಮನಾಗಿ ಪೈಪೋಟಿ ನೀಡಿದ ಕರ್ನಾಟಕ ಜೆಸ್ಸಿ ಸಂದೇಶ್‌ ಕೂಡ ಇಷ್ಟೇ ಎತ್ತರಕ್ಕೆ ಜಿಗಿದರು. ಭಾರತ ಅಥ್ಲೆಟಿಕ್‌ ಫೆಡರೇಷನ್‌ ಏಷ್ಯನ್ ಕ್ರೀಡಾಕೂಟಕ್ಕೆ ನಿಗದಿಪಡಿಸಿದ ಅರ್ಹತಾ ಮಟ್ಟ ಕೂಡ 2.24 ಮೀ. ಆಗಿತ್ತು.

ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಮೊದಲ ಮೂರೂ ಸ್ಥಾನ ಪಡೆದ ಓಟಗಾರ್ತಿಯರು ಏಷ್ಯನ್‌ ಗೇಮ್ಸ್‌ಗೆ ನಿಗದಿಪಡಿಸಿದ ಸಮಯದೊಳಗೇ (13.63 ಸೆ.) ಓಟ ಪೂರೈಸಿದರು. ಶುಕ್ರವಾರ 100 ಮೀ. ಓಟದಲ್ಲೂ ಚಿನ್ನ ಗೆದ್ದಿದ್ದ ವಿಶಾಖಪಟ್ಟಣದ ಜ್ಯೋತಿ ಹರ್ಡಲ್ಸ್‌ನಲ್ಲೂ ಹೆಚ್ಚಿನ ಪೈಪೋಟಿ ಎದುರಿಸದೇ 12.92 ಸೆ.ಗಳಲ್ಲಿ ಅಂತರ ಕ್ರಮಿಸಿದರು. ತಮಿಳುನಾಡಿನ ನಿತ್ಯಾ ಆರ್‌. ಮತ್ತು ತೆಲಂಗಾಣದ ಅಗಸರ ನಂದಿನಿ ಕ್ರಮವಾಗಿ 13.48 ಸೆ. ಮತ್ತು 13.55 ಸೆ.ಗಳಲ್ಲಿ ಓಟ ಪೂರೈಸಿದರು.

ADVERTISEMENT

ಡೆಕಾಥ್ಲಾನ್‌ನಲ್ಲಿ ಕಣಕ್ಕಿಳಿದಿರುವ ಹೈಜಂಪ್‌ ಪಟು ತೇಜಸ್ವಿನ್‌ ಶಂಕರ್‌ 7576 ಪಾಯಿಂಟ್ಸ್‌ ಸಂಗ್ರಹಿಸಿ ಏಷ್ಯನ್‌ ಗೇಮ್ಸ್‌ ಅರ್ಹತಾ ಮಟ್ಟ (7,500) ಸಾಧಿಸಿದರು.

ಟ್ರಿಪಲ್‌ ಜಂಪ್‌ನಲ್ಲೂ ಮೊದಲ ಮೂರು ಸ್ಥಾನ ಪಡೆದವರು ಏಷ್ಯನ್‌ ಗೇಮ್ಸ್‌ಗೆ ನಿಗದಿಪಡಿಸಿದ್ದ (16.60 ಮೀ) ಅರ್ಹತಾ ಮಟ್ಟ ಸಾಧಿಸಿದರು. ತಮಿಳುನಾಡಿನ ಪ್ರವೀಣ್ ಚಿತ್ರವೇಲ್‌ 17.07 ಮೀ. ಜಿಗಿದು ಚಿನ್ನ ಗೆದ್ದರು. ಕೇರಳದ ಅಬ್ದುಲ್ಲಾ ಅಬೂಬಕ್ಕರ್ (16.88) ಮತ್ತು ಎಲ್ಟೋಸ್‌ ಪಾಲ್ (16.75 ಮೀ.) ಕೂಡ ಉತ್ತಮ ಸಾಧನೆ ತೋರಿದರು.

ಜಕಾರ್ತಾ ಏಷ್ಯನ್‌ ಕ್ರೀಡಾಕೂಟ ಹೆಪ್ಟಾಥ್ಲಾನ್‌ ಚಿನ್ನ ಗೆದ್ದುಕೊಂಡಿದ್ದ ಮಧ್ಯ ಪ್ರದೇಶದ ಸ್ವಪ್ನಾ ಬರ್ಮನ್‌ ಈ ಬಾರಿಯೂ ಸುಲಭವಾಗಿ ಅರ್ಹತಾ ಮಟ್ಟ (5654) ದಾಟಿದರು. ಅವರು 5918 ಪಾಯಿಂಟ್ಸ್‌ ಕಲೆಹಾಕಿದರು. ಬೆಳ್ಳಿಯ ಪದಕ ಗೆದ್ದ ಅಗಸರ ನಂದಿನಿ ಸಾಧನೆ ಕೂಡ ಕಡಿಮೆ ಏನಿರಲಿಲ್ಲ. ಅವರು 5703 ಪಾಯಿಂಟ್ಸ್‌ ಸಂಗ್ರಹಿಸಿ ಹಾಂಗ್‌ ಜೌ ಕ್ರೀಡಾಕೂಟಕ್ಕೆ ಸ್ಥಾನ ಖಚಿತಪಡಿಸಿಕೊಂಡರು.

ಮಹಿಳೆಯರ ಪೋಲ್‌ವಾಲ್ಡ್‌ನಲ್ಲಿ ತಮಿಳುನಾಡಿನ ಪವಿತ್ರಾ ವೆಂಕಟೇಶ್ ಚಿನ್ನ ಗೆಲ್ಲುವ ಹಾದಿಯಲ್ಲಿ 4.10 ಮೀ. ಎತ್ತರಕ್ಕೆ ಜಿಗಿದು ಅರ್ಹತಾ ಮಟ್ಟ (4.10) ಸಾಧಿಸಿದರು. ಬೆಳ್ಳಿಯ ಪದಕ ಕರ್ನಾಟಕದ ಸಿಂಧುಶ್ರೀ (3.80 ಮೀ.) ಪಾಲಾಯಿತು. ಹರಿಯಾಣದ ವನ್ಶಿಕಾ (3.40 ಮೀ.) ಕಂಚಿನ ಪದಕ ಗಳಿಸಿದರು. ಕರ್ನಾಟಕದ ಇನ್ನೋರ್ವ ಸ್ಪರ್ಧಿ ನಿಶಾ ಬಾನು ಅಬ್ದುಲ್ಲಾ (3.30 ಮೀ.) ನಾಲ್ಕನೇ ಸ್ಥಾನ ಪಡೆದರು. 

ಮೂರನೇ ದಿನದ ಫಲಿತಾಂಶಗಳು:

ಪುರುಷರ ವಿಭಾಗ: 110 ಮೀ. ಹರ್ಡಲ್ಸ್‌: ತೇಜಸ್‌ ಅಶೋಕ್‌ ಶಿರ್ಸೆ (ಮಹಾರಾಷ್ಟ್ರ)–1, ಸಚಿನ್‌ ಬಿನು (ಕೇರಳ)–2, ರೊನಾಲ್ಡ್‌ ಬಾಬು (ಮಧ್ಯಪ್ರದೇಶ)–3, ಕಾಲ: 13.87 ಸೆ.; ಹೈಜಂಪ್‌: ಸರ್ವೇಶ್ ಅನಿಲ್ ಕುಶಾರೆ (ಮಹಾರಾಷ್ಟ್ರ)–1, ಜೆಸ್ಸಿ ಸಂದೇಶ್ (ಕರ್ನಾಟಕ)–2, ಭಾರತಿ ವಿಶ್ವನಾಥನ್‌ (ತಮಿಳುನಾಡು)–3, ಎತ್ತರ: 2.24 ಮೀ.;  ಟ್ರಿಪಲ್‌ ಜಂಪ್‌: ಪ್ರವೀಣ್ ಚಿತ್ರವೇಲ್‌ (ತಮಿಳುನಾಡು)–1, ಅಬ್ದುಲ್ಲಾ ಅಬೂಬಕ್ಕರ್‌ (ಕೇರಳ)–2, ಎಲ್ಡೋಸ್‌ ಪಾಲ್‌ (ಕೇರಳ)–3, ಎತ್ತರ: 17.07 ಮೀ.; ಹ್ಯಾಮರ್‌ ಥ್ರೊ: ತರಣವೀರ್‌ ಸಿಂಗ್ ಬೇನ್ಸ್‌ (ಪಂಜಾಬ್‌)–1, ನಿತೇಶ್ ಪೂನಿಯಾ (ರಾಜಸ್ಥಾನ)–2, ದಮನೀತ್‌ ಸಿಂಗ್‌ (ಪಂಜಾಬ್‌)–3, ದೂರ: 71.10 ಮೀ.; ಡೆಕಾಥ್ಲಾನ್‌: ತೇಜಸ್ವಿನ್‌ ಶಂಕರ್‌ (ದೆಹಲಿ)–1, ಯಮನ್‌ದೀಪ್‌ ಶರ್ಮಾ (ರಾಜಸ್ಥಾನ)–2, ಗೋಕುಲ್ ಎಸ್‌. (ಕೇರಳ)–3, ಪಾಯಿಂಟ್ಸ್‌: 7576.; 4x100 ಮೀ. ರಿಲೇ: ತಮಿಳುನಾಡು (40.15 ಸೆ)–1, ಒಡಿಶಾ (40.24 ಸೆ.)–2, ಪಂಜಾಬ್‌ (41.05 ಸೆ)–3.

ಮಹಿಳೆಯರು: 100 ಮೀ. ಹರ್ಡಲ್ಸ್‌: ಜ್ಯೋತಿ ಯೆರ‍್ರಾಜಿ (ಆಂಧ್ರ ಪ್ರದೇಶ)–1, ನಿತ್ಯಾ ಆರ್‌. (ತಮಿಳುನಾಡು)–2, ಅಗಸರ ನಂದಿನಿ (ತೆಲಂಗಾಣ)–3, ಕಾಲ: 12.92 ಸೆ.; ಪೋಲ್‌ವಾಲ್ಟ್‌: ಪವಿತ್ರಾ ವೆಂಕಟೇಶ್ (ತಮಿಳುನಾಡು)–1, ಸಿಂಧುಶ್ರೀ (ಕರ್ನಾಟಕ)–2, ವನ್ಶಿಕಾ ಘಂಗಾಸ್ (ಹರಿಯಾಣ)–3, ಎತ್ತರ: 4.10 ಮೀ.; ಹೆಪ್ಟಥ್ಲಾನ್: ಸ್ವಪ್ನಾ ಬರ್ಮನ್‌ (ಮಧ್ಯ ಪ್ರದೇಶ)–1, ಅಗಸರ ನಂದಿನಿ (ತೆಲಂಗಾಣ)–2, ಸೌಮ್ಯಾ ಮುರುಗನ್‌ (ಆಂಧ್ರ ಪ್ರದೇಶ)–3, ಪಾಯಿಂಟ್ಸ್‌: 5,918.; 4x100 ಮೀ. ರಿಲೇ: ಕೇರಳ (46.35 ಸೆ.)–1, ಆಂಧ್ರ ಪ್ರದೇಶ (46.61 ಸೆ.)–2, ಒಡಿಶಾ (46.68 ಸೆ.)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.