ADVERTISEMENT

ಮಂಗಳೂರು ವಿವಿಗೆ 5ನೇ ಬಾರಿ ಚಾಂಪಿಯನ್‌ ಪಟ್ಟ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ ಚಾಂಪಿಯನ್ಸ್‌ಷಿಪ್‌: ಆಳ್ವಾಸ್‌ ಪಾರಮ್ಯ; ಶಶಿಕಾಂತ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 19:30 IST
Last Updated 7 ಜನವರಿ 2022, 19:30 IST
ಚಾಂಪಿಯನ್‌ ಆದ ಮಂಗಳೂರು ವಿವಿ ತಂಡದವರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ
ಚಾಂಪಿಯನ್‌ ಆದ ಮಂಗಳೂರು ವಿವಿ ತಂಡದವರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ   

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟದಲ್ಲಿ ಮತ್ತೊಮ್ಮೆ ಪಾರಮ್ಯ ಮೆರೆಯಿತು. ಆಳ್ವಾಸ್‌ ಕಾಲೇಜಿನ ಸಹಯೋಗದಲ್ಲಿ ಇಲ್ಲಿನ ಸ್ವರಾಜ್‌ ಮೈದಾನದಲ್ಲಿ ಶುಕ್ರವಾರ ಕೊನೆಗೊಂಡ ಕೂಟದ 81ನೇ ಆವೃತ್ತಿಯ ಚಾಂಪಿಯನ್ ಪಟ್ಟ ಮಂಗಳೂರು ವಿವಿ ಮುಡಿಯನ್ನು ಅಲಂಕರಿಸಿತು.

ಆತಿಥೇಯ ವಿಶ್ವವಿದ್ಯಾಲಯದ ಅಥ್ಲೀಟ್‌ಗಳು 105 ಪಾಯಿಂಟ್‌ ಗಳಿಸಿ 5 ಬಾರಿ ಸಮಗ್ರ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಲವ್ಲಿ ಪ್ರೊಫೆಷನಲ್ ವಿವಿ 42 ಪಾಯಿಂಟ್‌ಗಳೊಂದಿಗೆ ರನ್ನರ್‌ ಅಪ್‌ ಆದರೆ ರೋಹ್ಟಕ್‌ನ ಮಹರ್ಷಿ ವಿವಿ 37 ಪಾಯಿಂಟ್‌ ಗಳಿಸಿ ಮೂರನೇ ಸ್ಥಾನ ಗಳಿಸಿತು. ನಾಲ್ಕನೇ ಸ್ಥಾನ ಕೇರಳದ ಕೋಟಯಂನ ಮಹಾತ್ಮಗಾಂಧಿ ವಿವಿ (23 ಪಾಯಿಂಟ್‌) ಪಾಲಾಯಿತು.

ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ನಾಲ್ಕು ದಿನ ಮಿಂಚಿನ ಸಂಚಾರ ಮೂಡಿಸಿದ ಕೂಟದಲ್ಲಿ 8 ದಾಖಲೆಗಳು ಆದವು. ಈ ಪೈಕಿ 2 ಮಂಗಳೂರು ವಿವಿಯ ಕ್ರೀಡಾಪಟುಗಳ ಹೆಸರಿನಲ್ಲಿ ಸೇರಿಕೊಂಡವು. ತಲಾ 6 ಚಿನ್ನ ಮತ್ತು ಬೆಳ್ಳಿ, 4 ಕಂಚಿನ ಪದಕಗಳು ಈ ವಿವಿಯ ಪಾಲಾದವು. 20 ಮೀಟರ್ಸ್‌ ವೇಗದ ನಡಿಗೆಯಲ್ಲಿ ದಾಖಲೆ ಬರೆದ ಪಟಿಯಾಲ ವಿವಿಯ ಅಕ್ಷದೀಪ್‌ ಸಿಂಗ್‌ ಉತ್ತಮ ಅಥ್ಲೀಟ್‌ ಆಗಿ ಹೊರಹೊಮ್ಮಿದರು.

ADVERTISEMENT

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಚಿನ್ನದ ಪದಕ ಗೆದ್ದವರಿಗೆ ₹ 25 ಸಾವಿರ, ಬೆಳ್ಳಿ ಹಾಗೂ ಕಂಚು ವಿಜೇತರಿಗೆ ಕ್ರಮವಾಗಿ ₹15 ಸಾವಿರ ಹಾಗೂ ₹10 ಸಾವಿರ ಮೊತ್ತವನ್ನು ನೀಡಿತು. ಕೂಟ ದಾಖಲೆ ಮಾಡಿದವರಿಗೆ ₹ 25 ಸಾವಿರ ಲಭಿಸಿತು.

ಕೊನೆಯ ದಿನದ ಫಲಿತಾಂಶಗಳು: 200 ಮೀಟರ್ಸ್‌ ಓಟ: ಶಶಿಕಾಂತ್ (ಬೆಂಗಳೂರು ವಿವಿ)–1, ವಿಘ್ನೇಶ್ (ಮಂಗಳೂರು ವಿವಿ)–2, ಅಮನ್ ಖೋಖರ್ (ಮಹರ್ಷಿ ದಯಾನಂದ ವಿವಿ)–3. ಕಾಲ: 21. 30 ಸೆಕೆಂಡು; 800 ಮೀಟರ್ಸ್‌ ಓಟ: ಪರ್ವೇಜ್‌ ಖಾನ್ (ಮಂಗಳೂರು ವಿವಿ)–1, ದೇವಯ್ಯ ಟಿ.ಎಚ್ (ಮಂಗಳೂರು ವಿವಿ)–2, ಇರ್ಫಾನ್ (ನೆಹರೂ ಗ್ರಾಮ್ ಭಾರತಿ ವಿವಿ)3. ಕಾಲ: 1 ನಿಮಿಷ 52.42 ಸೆಕೆಂಡು; ಸ್ಟೀಪಲ್ ಚೇಸ್: ಲೋಕೇಶ್ ಚೌಧಾರ್ (ಮಹರ್ಷಿ ದಯಾನಂದ ವಿವಿ)–1, ಪ್ರಿನ್ಸ್ ರಾಜ್ (ಲವ್ಲಿ ಪ್ರೊಫೆಷನಲ್ ವಿವಿ)–2, ಸುಮಿತ್ ಕುಮಾರ್ (ಮಂಗಳೂರು ವಿವಿ)–3; (ಕಾಲ: 8 ನಿಮಿಷ 51.23 ಸೆಕೆಂಡು). ಕೂಟ ದಾಖಲೆ. ಹಿಂದಿನ ದಾಖಲೆ: ಹರಿಭಕ್ಷ್‌ ಸಿಂಗ್, ಮಂಗಳೂರು ವಿವಿ (ಕಾಲ: 9 ನಿಮಿಷ 15. 9 ಸೆಕೆಂಡು); 400 ಮೀಟರ್ಸ್‌ ಹರ್ಡಲ್ಸ್: ಸುರೇಂದರ್ ಎಸ್ (ಭಾರತೀಯಾರ್ ವಿವಿ)–1, ರೋಹಿತ್ ಎ (ಕ್ಯಾಲಿಕಟ್ ವಿವಿ)–2, ಪಿ. ಪ್ರವೀಣ್ ಕುಮಾರ್ (ಮಧುರೈ ಕಾಮರಾಜ್ ವಿವಿ–3. ಕಾಲ: 51.77 ಸೆಕೆಂಡು; ಹಾಫ್ ಮ್ಯಾರಥಾನ್: ಆರಿಫ್ ಆಲಿ (ಜನನಾಯಕ್ ಚಂದ್ರಶೇಖರ್ ವಿವಿ)–1, ಅನಿಲ್ ಕುಮಾರ್ (ಮಂಗಳೂರು ವಿವಿ)–2, ರೋಹಿತ್ ಯಾದವ್ (ನೆಹರೂ ಗ್ರಾಮ್ ಭಾರತಿ ಡೀಮ್ಡ್ ವಿವಿ)–3. (ಕಾಲ: 1 ತಾಸು 5 ನಿಮಿಷ 56.29 ಸೆಕೆಂಡು); 4x100 ಮೀ ರಿಲೆ: ಮಂಗಳೂರು ವಿವಿ -1, ಭಾರತೀಯಾರ್ ವಿವಿ–2, ಮದ್ರಾಸ್‌ ವಿವಿ–3; ಕಾಲ: 40.74 ಸೆ. ಕೂಟ ದಾಖಲೆ. ಹಿಂದಿನ ದಾಖಲೆ: ಮಂಗಳೂರು ವಿವಿ (40.83 ಸೆಕೆಂಡು); 4x400 ಮೀ ರಿಲೆ: ಮಂಗಳೂರು ವಿವಿ–1, ಚೌಧರಿ ಚರಣ್ ಸಿಂಗ್ ವಿವಿ–2, ಕೋಟಯಂ ಮಹಾತ್ಮ ಗಾಂಧಿ ವಿವಿ-3. ಕಾಲ: 3 ನಿಮಿಷ 11.91 ಸೆ; ಲಾಂಗ್ ಜಂಪ್‌: ಭೂಪೇಂಧರ್ (ಗುರು ಜಂಭೇಶ್ವರ್ ವಿವಿ)–1, ಜಸ್ವಿನ್ ಅಲ್‌ಡ್ರಿನ್ (ಮದ್ರಾಸ್‌ ವಿವಿ)–2, ಶ್ರೀರಾಮ್ ವಿ (ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ)–3. ದೂರ: 7.64 ಮೀಟರ್ಸ್‌; ಜಾವೆಲಿನ್ ಥ್ರೋ: ವಿಕ್ರಾಂತ್ ಮಲಿಕ್ (ಮಂಗಳೂರು ವಿವಿ)–1, ಯಶ್‌ವೀರ್ ಸಿಂಗ್ (ಮಹರ್ಷಿ ದಯಾನಂದ ವಿವಿ)–2, ಅಜಯ್ ರಾಜ್ (ಲವ್ಲಿ ಪ್ರೊಫೆಷನಲ್ ವಿವಿ)–3. ದೂರ: 77. 82; ಹ್ಯಾಮರ್ ಥ್ರೋ: ದಮನೀತ್ ಸಿಂಗ್ (ಪಟಿಯಾಲ ವಿವಿ)–1, ಅಜಯ್ ಕುಮಾರ್ (ಮಂಗಳೂರು ವಿವಿ)–2, ಫಾರೂಕ್ ಅಹಮ್ಮದ್ (ದೀನ್ ದಯಾಳ್ ಉಪಾಧ್ಯಾಯ ವಿವಿ)–3. ದೂರ: 63 ಮೀಟರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.