ADVERTISEMENT

ಕಾರ್ಯಕಾರಿ ಸಮಿತಿ ಸದಸ್ಯರಿಂದ ಕಡೆಗಣನೆ: ಪಿ.ಟಿ.ಉಷಾ ಆಕ್ರೋಶ

ಪಿಟಿಐ
Published 8 ಏಪ್ರಿಲ್ 2024, 16:00 IST
Last Updated 8 ಏಪ್ರಿಲ್ 2024, 16:00 IST
<div class="paragraphs"><p>ಪಿ.ಟಿ.ಉಷಾ</p></div>

ಪಿ.ಟಿ.ಉಷಾ

   

ನವದೆಹಲಿ: ‘ನನ್ನ ವಿರುದ್ಧ ಬಂಡಾಯವೆದ್ದಿರುವ ಕಾರ್ಯಕಾರಿ ಸಮಿತಿ ಸದಸ್ಯರು ನಾನು ನೇಮಿಸಿದ ಅಧಿಕಾರಿಗೆ ವಜಾ ಪತ್ರ ನೀಡುವುದೂ ಸೇರಿದಂತೆ ಪ್ರತಿರೋಧದ ಕೃತ್ಯಗಳ ಮೂಲಕ ತಮ್ಮನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಸೋಮವಾರ ಹೇಳಿದ್ದಾರೆ.

‘ಅನಧಿಕೃತ ವ್ಯಕ್ತಿಗಳು’ ಪ್ರಧಾನ ಕಚೇರಿಯೊಳಗೆ ಪ್ರವೇಶಿಸಬಾರದು ಎಂಬ ನೋಟಿಸ್ ಅನ್ನು ಕಾರ್ಯಕಾರಿ ಸಮಿತಿಯ ಒಂಬತ್ತು ಸದಸ್ಯರು ಕಳೆದ ಶುಕ್ರವಾರ ಕಚೇರಿ ಆವರಣದಲ್ಲಿ ಅಂಟಿಸಿದ್ದರು. ಇತ್ತೀಚೆಗೆ ಉಷಾ ನೇಮಕ ಮಾಡಿರುವ ಇಬ್ಬರು ಸದಸ್ಯರನ್ನು ಗುರಿಯಾಗಿಸಿ ಈ ನೋಟಿಸ್‌ ಅಂಟಿಸಲಾಗಿತ್ತು. ‘ಇದು ದಬ್ಬಾಳಿಕೆಯ ಕ್ರಮ’ ಎಂದು ಉಷಾ ಟೀಕಿಸಿದ್ದಾರೆ.

ADVERTISEMENT

ಐಒಎ ಸಿಇಒ ಆಗಿ ರಘುರಾಮ್ ಅಯ್ಯರ್ ಅವರ ನೇಮಕವನ್ನು ಅನೂರ್ಜಿತ ಎಂದು ಘೋಷಿಸುವ ಅಮಾನತು ಆದೇಶಕ್ಕೆ ಸಹಿ ಹಾಕಿದ್ದೇವೆ ಎಂದು ಬಹುತೇಕ ಸದಸ್ಯರು ಈ ಹಿಂದೆ ಹೇಳಿಕೊಂಡಿದ್ದರು. ಐಒಎ ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಅಸಿಸ್ಟೆಂಟ್‌ ಆಗಿ ಅಜಯ್ ನಾರಂಗ್ ಅವರ ನೇಮಕವನ್ನೂ ರದ್ದುಪಡಿಸಲಾಗಿದೆ ಎಂದು ಸದಸ್ಯರು ಹೇಳಿದ್ದರು. 

‘ನಾವು ಇನ್ನೂ ತಂಡವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರತಿಯೊಂದು ಕೃತ್ಯವೂ ನನ್ನನ್ನು ಕಡೆಗಣಿಸುವ ಪ್ರಯತ್ನವಾಗಿದೆ‘ ಎಂದು ಉಷಾ ಅವರು ಬಂಡಾಯ ಸದಸ್ಯರಿಗೆ ಕಳುಹಿಸಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

‘ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಮತ್ತು ವಜಾಗೊಳಿಸುವುದು ಸೇರಿದಂತೆ ದೈನಂದಿನ ಆಡಳಿತಾತ್ಮಕ ಕಾರ್ಯಗಳು ಕಾರ್ಯಕಾರಿ ಸಮಿತಿ ಕೆಲಸವಲ್ಲ ಎಂದು ನೆನಪಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಯಿಲ್ಲ. ಕಾರ್ಯಕಾರಿ ಸಮಿತಿಯಾಗಿ ತನ್ನ ಅಧಿಕಾರ ಮತ್ತು ಹಕ್ಕನ್ನು  ಐಒಎಯನ್ನು ಎತ್ತರಕ್ಕೆ ಕೊಂಡೊಯ್ಯಲು ಬಳಸಬೇಕು‘ ಎಂದು ಅವರು ಹೇಳಿದ್ದಾರೆ.

‘ಕಚೇರಿ ಆವರಣದಲ್ಲಿ ಅಂಟಿಸಿರುವ ನೋಟಿಸ್ ಪ್ರತಿಗಳನ್ನು ತೆಗೆದುಹಾಕುವಂತೆ ಐಒಎ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ. ನನ್ನ ಕಾರ್ಯನಿರ್ವಾಹಕ ಸಹಾಯಕರ ಮೂಲಕ ನನ್ನ ಕಚೇರಿಯಿಂದ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ಅನುಸರಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದರು. 

‘ಕ್ಯಾಪ್ಟನ್ ಅಜಯ್ ಕುಮಾರ್ ನಾರಂಗ್ (ನಿವೃತ್ತ) ಮಾಡಿದ ಕೆಲಸದಿಂದ ನನಗೆ ತೃಪ್ತಿ ಇದೆ ಮತ್ತು ಅವರ ಸೇವೆಗಳನ್ನು ಕೊನೆಗೊಳಿಸಲು ಯಾವುದೇ ಕಾರಣ ಕಂಡುಬಂದಿಲ್ಲ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.