ADVERTISEMENT

ಐಒಎ ಸಭೆ ಕಾವೇರುವ ಸಾಧ್ಯತೆ

ಪಿಟಿಐ
Published 25 ಸೆಪ್ಟೆಂಬರ್ 2024, 16:17 IST
Last Updated 25 ಸೆಪ್ಟೆಂಬರ್ 2024, 16:17 IST
   

ನವದೆಹಲಿ (ಪಿಟಿಐ): ಗುರುವಾರ ನಿಗದಿಯಾಗಿರುವ ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಕಾರ್ಯಕಾರಿ ಸಮಿತಿ ಸಭೆಯ ಕಾವೇರುವ ಸಾಧ್ಯತೆಯಿದೆ. ಸಮಿತಿ ಸದಸ್ಯರು ತಮಗೆ ಅಧ್ಯಕ್ಷೆ ಪಿ.ಟಿ.ಉಷಾ ಬರೆದಿರುವ ‘ಎಚ್ಚರಿಕೆಯ ಪತ್ರ ಸೇರಿದಂತೆ ವಿವಾದಾತ್ಮಕ ವಿಷಯಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಿದ್ದಾರೆ.

ಪಿ.ಟಿ.ಉಷಾ ಮತ್ತು ಐಒಎ ಖಜಾಂಚಿ ಸಹದೇವ್ ಯಾದವ್ ಮಧ್ಯೆ ಅಂತಃಕಲಹ ಉಲ್ಭಣಗೊಂಡಿರುವ ಸಮಯದಲ್ಲೇ ಈ ಸಭೆ ನಡೆಯುತ್ತಿದೆ.

ಖಜಾಂಚಿ ಹುದ್ದೆಗೆ ತಮ್ಮ ಅರ್ಹತೆ ಪ್ರಶ್ನಿಸಿ ಪತ್ರವೊಂದರ ದೂರಿನ ಆಧಾರದಲ್ಲಿ ಅಧ್ಯಕ್ಷೆಯು ತಮಗೆ ಷೋಕಾಸ್ ನೋಟಿಸ್‌ ಕಳುಹಿಸಿದ್ದಕ್ಕೆ ಕೆಂಡಾಮಂಡಲಗೊಂಡಿರುವ ಸಹದೇವ್, ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆಂದು ಆರೋಪಿಸಿ ಉಷಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಕಾರ್ಯಕಾರಿ ಸಮಿತಿ ಸದಸ್ಯರಿಗೆ ಉಷಾ ಅವರು ಕಾಲಕಾಲಕ್ಕೆ ಅಕ್ರಮ ಮತ್ತು ಎಚ್ಚರಿಕೆ ಧಾಟಿಯ ಪತ್ರಗಳನ್ನು ಕಳುಹಿಸುತ್ತಿರುವ ವಿಷಯವನ್ನು ಸಭೆಯಲ್ಲಿ ಚರ್ಚೆಯಾಗುವ 14 ಅಂಶಗಳ ಕಾರ್ಯಸೂಚಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಐಒಎ ಸಂವಿಧಾನದಡಿ ಅಧ್ಯಕ್ಷರ ಅಧಿಕಾರದ ಕುರಿತೂ ಚರ್ಚೆ ನಡೆಯಲಿದೆ. ಅಧ್ಯಕ್ಷರ ವರ್ತನೆಯ ಕುರಿತು ಐಒಎ ಎಥಿಕ್ಸ್‌ ಕಮಿಷನ್‌ಗೆ ವರದಿ ಮಾಡುವ ಅಗತ್ಯದ ವಿಷಯದಲ್ಲೂ ನಿರ್ಧಾರ ಕೈಗೊಳ್ಳಲಿದೆ.

ಸಭೆಯ ಬಗ್ಗೆ ಅಧಿಕೃತ ಪತ್ರವನ್ನು ಕೌನ್ಸಿಲ್‌ನ 12 ಸದಸ್ಯರು ಜಂಟಿಯಾಗಿ ಹೊರಡಿಸಿದ್ದಾರೆ. ಇವರಲ್ಲಿ ಹಿರಿಯ ಉಪಾಧ್ಯಕ್ಷ ಅಜಯ್ ಪಟೇಲ್‌, ಉಪಾಧ್ಕ್ಷ ರಾಜಲಕ್ಷ್ಮಿ ಸಿಂಗ್ ದೇವ್‌, ಉಪಾಧ್ಯಕ್ಷ ಗಗನ್ ನಾರಂಗ್ ಮತ್ತು ಮಾಜಿ ಕುಸ್ತಿಪಟು ಯೋಗೇಶ್ವರ ದತ್‌ ಒಳಗೊಂಡಿದ್ದಾರೆ. ಐಒಎಯ ಅಥ್ಲೀಟ್ಸ್‌ ಆಯೋಗದಲ್ಲಿರುವ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಮತ್ತು ಟೇಬಲ್ ಟೆನಿಸ್‌ ಆಟಗಾರ ಎ.ಶರತ್ ಕಮಲ್ ಅವರು ಸಹಿ ಹಾಕಿಲ್ಲ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆಯೂ ಚರ್ಚೆಯಾಗಲಿದೆ. ಪ್ಯಾರಿಸ್‌ನಲ್ಲಿದ್ದಾಗ ಐಒಎ ಖರ್ಚಿನಲ್ಲಿ ಅಧ್ಯಕ್ಷೆ ಕೊಠಡಿಯ ನವೀಕರಣವನ್ನು ಮಾಡಿದ ವಿಷಯವೂ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.