ನವದೆಹಲಿ: ರಿಯಲನ್ಸ್ ಇಂಡಸ್ಟ್ರೀಸ್ ಜೊತೆ ಮಾಡಿಕೊಂಡ ಪ್ರಾಯೋಜಕತ್ವ ಒಪ್ಪಂದದಿಂದ ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಗೆ ₹24 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ಸಂಸ್ಥೆಯ ಖಜಾಂಚಿ ಸಹದೇವ್ ಯಾದವ್ ಅವರು ಮಾಡಿರುವ ಆರೋಪವನ್ನು ಅಧ್ಯಕ್ಷೆ ಪಿ.ಟಿ.ಉಷಾ ಮಂಗಳವಾರ ತಳ್ಳಿಹಾಕಿದ್ದಾರೆ.
‘ಇದು ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಲು ರೂಪಿಸಿರುವ ಸಂಚು ಆಗಿದೆ. ತಪ್ಪುದಾರಿಗೆಳೆಯುವ ಇಂಥ ಮಾಹಿತಿ ನೀಡಿದ ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ’ ಉಷಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
‘ಐಒಎ ಎಕ್ಸಿಕ್ಯೂಟಿವ್ ಕೌನ್ಸಿಲ್ ಗಮನಕ್ಕೆ ತಾರದೇ ಉಷಾ ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಿಎಜಿ ವರದಿಯಲ್ಲಿ ಸಹದೇವ್ ಯಾದವ್ ಹೇಳಿದ್ದು, ಇದನ್ನು ಉಷಾ ನಿರಾಕರಿಸಿದ್ದಾರೆ. ತಮ್ಮ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಮತ್ತು ಐಒಎ ವಿಶ್ವಾಸಕ್ಕೆ ಭಂಗ ತರುವ ಯತ್ನ ಇದು ಎಂದು ಉಷಾ ಹೇಳಿದ್ದಾರೆ’ ಎಂದು ಐಒಎ ಪ್ರಕಟಣೆ ತಿಳಿಸಿದೆ.
‘ವಾಸ್ತವವೆಂದರೆ, ಈ ಒಪ್ಪಂದ ಪ್ರಸ್ತಾವವನ್ನು 2023ರ ಸೆಪ್ಟೆಂಬರ್ 9 ರಂದು ಎಕ್ಸಿಕ್ಯೂಟಿವ್ ಕೌನ್ಸಿಲ್ ಎಲ್ಲ ಸದಸ್ಯರಿಗೆ ನೀಡಲಾಗಿತ್ತು. ನಂತರ ಹಂಗಾಮಿ ಸಿಇಒ ಅವರಿಗೆ ಅ. 5ರಂದು ನೀಡಲಾಗಿತ್ತು. ಒಪ್ಪಂದದ ಚರ್ಚೆಯಾಗುವಾಗ ಪ್ರಾಯೋಜಕತ್ವ ಸಮಿತಿಯ ಪ್ರತಿನಿಧಿಯಾಗಿ ರೋಹಿತ್ ರಾಜಪಾಲ್ (ಟೆನಿಸ್ ಆಟಗಾರ) ಹಾಜರಿದ್ದರು’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಈ ಒಪ್ಪಂದದ ಭಾಗವಾಗಿ ರಿಲಯನ್ಸ್‌ಗೆ, ಕ್ರೀಡೆಗಳ ಸಮಯದಲ್ಲಿ ಇಂಡಿಯಾ ಹೌಸ್ ನಿರ್ಮಾಣಕ್ಕೆ ಅಧಿಕಾರ ದೊರಕಿತ್ತು.
ರಿಲಯನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದೂ ಉಷಾ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.