ನವದೆಹಲಿ: ಕಾಮನ್‌ವೆಲ್ತ್ ಕ್ರೀಡೆಗಳಿಂದ ಶೂಟಿಂಗ್ ಕ್ರೀಡೆಯನ್ನು ಕೈಬಿಟ್ಟಿರುವುದನ್ನು ಪ್ರತಿಭಟಿಸಿ 2022ರ ಬರ್ಮಿಂಗ್‌ಹ್ಯಾಮ್ ಕೂಟಕ್ಕೆ ಬಹಿಷ್ಕಾರದ ಬೆದರಿಕೆ ಹಾಕಿದ್ದ ಭಾರತ ಆ ನಿರ್ಧಾರದಿಂದ ಹಿಂದೆಸರಿದಿರುವುದಾಗಿ ಸೋಮವಾರ ತಿಳಿಸಿದೆ. ಜೊತೆಗೆ 2026 ಅಥವಾ 2030ರ ಕ್ರೀಡೆಗಳ ಆತಿಥ್ಯ ವಹಿಸಲು ಬಿಡ್ ಸಲ್ಲಿಸುವುದಾಗಿಯೂ ಹೇಳಿದೆ.
ಬರ್ಮಿಂಗ್‌ಹ್ಯಾಮ್ ಕ್ರೀಡೆಗಳ ಆರಂಭಕ್ಕೆ ಮೊದಲು ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಆತಿಥ್ಯಕ್ಕಾಗಿ ಪ್ರಸ್ತಾವ ಸಲ್ಲಿಸಲೂ ಐಒಎ ವಾರ್ಷಿಕ ಮಹಾಸಭೆಯಲ್ಲಿ ನಿರ್ಧರಿಸಲಾಯಿತು.ಕಾಮನ್‌ವೆಲ್ತ್ ಕ್ರೀಡೆಗಳ ಫೆಡರೇಷನ್ (ಸಿಜಿಎಫ್) ಭಾರತಕ್ಕೆ ಇಂಥ ಸಲಹೆ ನೀಡಿತ್ತು.
2022ರ ಕ್ರೀಡೆಗಳಿಂದ ಶೂಟಿಂಗ್ ಕೈಬಿಟ್ಟಿರುವುದರಿಂದ ಆಗಿರುವ ನಷ್ಟ ತುಂಬಿಸಲು ಈ ರೀತಿಯ ಪ್ರತ್ಯೇಕ ಸ್ಪರ್ಧೆ ಆಯೋಜಿಸುವಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶೂಟಿಂಗ್ ಸಂಸ್ಥೆಗಳು ಸಲಹೆ ನೀಡಿದ್ದವು.
‘ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡೆಗಳಿಂದ ಹಿಂದೆಸರಿಯುವ ನಮ್ಮ ನಿರ್ಧಾರವನ್ನು ಕೈಬಿಡಲು ಐಒಎ ಮಹಾಸಭೆಯಲ್ಲಿ ನಿರ್ಧರಿಸಲಾಯಿತು. 2022ರ ಕ್ರೀಡೆಗಳಿಂದ ಭಾರತ ತನ್ನ ತಂಡವನ್ನು ಕಳುಹಿಸಲಿದೆ’ ಎಂದು ಐಒಎ ಮಹಾ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಭಾಗವಹಿಸುವ ಭಾರತದ ನಿರ್ಧಾರವನ್ನು ಸಿಜಿಎಫ್ ಅಧ್ಯಕ್ಷ ಡೇಮ್ ಲೂಯಿಸ್ ಮಾರ್ಟಿನ್ ಸ್ವಾಗತಿಸಿದ್ದಾರೆ.
‘ಭಾರತದ ನಿರ್ಧಾರದಿಂದ ಸಿಜಿಎಫ್ ಮತ್ತು ಕಾಮನ್‌ವೆಲ್ತ್ ಕ್ರೀಡಾ ಆಂದೋಲನಕ್ಕೆ ಸಂತಸವಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘2026 ಅಥವಾ 2030ರ ಕ್ರೀಡೆಗಳ ಆತಿಥ್ಯಕ್ಕೆ ಭಾರತ ಪ್ರಯತ್ನಿಸಲಿದೆ. ಇದಕ್ಕೆ ಅನುಮತಿ ನೀಡಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ಮೆಹ್ತಾ ಹೇಳಿದರು. ಈ ಸಂದರ್ಭದಲ್ಲಿ ಐಒಎ ಮುಖ್ಯಸ್ಥ ನರೀಂದರ್ ಬಾತ್ರಾ ಅವರೂ ಇದ್ದರು.
ಭಾರತ 2010ರಲ್ಲಿ ಕೊನೆಯ ಬಾರಿ ಕ್ರೀಡೆಗಳ ಆತಿಥ್ಯ ವಹಿಸಿತ್ತು. ಆದರೆ ಕಾಮಗಾರಿ, ಗುತ್ತಿಗೆ ಹಗರಣಗಳು ಇದಕ್ಕೆ ಕಪ್ಪುಚುಕ್ಕೆಯಾಗಿದ್ದವು. ನವದೆಹಲಿಯಲ್ಲಿ ಕ್ರೀಡೆಗಳು ನಡೆದಿದ್ದವು.
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ)ನಲ್ಲಿ ನಡೆದ 2018ರ ಕ್ರೀಡೆಗಳಲ್ಲಿ ಭಾರತ ಗೆದ್ದ 66 ಪದಕಗಳಲ್ಲಿ ಹೆಚ್ಚಿನ ಪಾಲು ಶೂಟಿಂಗ್ ವಿಭಾಗವೊಂದರಿಂದಲೇ (16 ಪದಕ) ಬಂದಿತ್ತು. ಶೂಟಿಂಗ್ ಕೈಬಿಟ್ಟಿದ್ದು ಸಹಜವಾಗಿ ಐಒಎ ಅಸಮಾಧಾನಕ್ಕೆ ಕಾರಣವಾಗಿತ್ತು.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ 2023ರ ಮಹಾಧಿವೇಶನವನ್ನು ಮುಂಬೈನಲ್ಲಿ ನಡೆಸಲು ಐಒಎ ಆಸಕ್ತಿ ವಹಿಸಿದ್ದು, ಇದಕ್ಕಾಗಿ ಅಂತಿಮ ಬಿಡ್ ಸಲ್ಲಿಸಲಿದೆ ಎಂದು ಅವರು ಹೇಳಿದರು.
2020ರ ರಾಷ್ಟ್ರೀಯ ಕ್ರೀಡೆಗಳನ್ನು ಅಕ್ಟೋಬರ್ 20ರಿಂದ ನವೆಂಬರ್ 4ರವರೆಗೆ ಗೋವಾದಲ್ಲಿ ನಡೆಸಲು ಭಾರತ ಒಲಿಂಪಿಕ್ ಸಂಸ್ಥೆಯ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.