ADVERTISEMENT

Paris Olympics 2024: ದಕ್ಷಿಣ ಕೊರಿಯಾ ಕ್ಷಮೆ ಕೇಳಿದ ಐಒಸಿ

ಪಥಸಂಚಲನ ವೇಳೆ ಉತ್ತರ ಕೊರಿಯಾ ಎಂದು ಪರಿಚಯಿಸಿ ಅಚಾತುರ್ಯ

ಏಜೆನ್ಸೀಸ್
Published 27 ಜುಲೈ 2024, 13:32 IST
Last Updated 27 ಜುಲೈ 2024, 13:32 IST
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ   

ಸೋಲ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕೊರಿಯಾ ಅಥ್ಲೀಟುಗಳನ್ನು, ಉತ್ತರ ಕೊರಿಯಾದವರು ಎಂದು ಸಂಬೋಧಿಸಿ ಉಂಟಾದ ಮುಜುಗರಕ್ಕೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು (ಐಒಸಿ) ಶನಿವಾರ ದಕ್ಷಿಣ ಕೊರಿಯಾದ ಕ್ಷಮೆ ಕೇಳಿದೆ.

ದಕ್ಷಿಣ ಕೊರಿಯಾ ಅಥ್ಲೀಟುಗಳ ತಂಡ ಸೆನ್‌ ನದಿಯಲ್ಲಿ ಪಥಸಂಚಲನದ ವೇಳೆ ಹಾದುಹೋಗುತ್ತಿದ್ದಂತೆ ಆ ತಂಡದ ಹೆಸರನ್ನು ‘ರಿಪಬ್ಲಿಕ್‌ ಡೆಮಾಕ್ರಟಿಕ್‌ ಡಿ ಕೋರಿ’ ಎಂದು ಫ್ರೆಂಚ್‌ ಭಾಷೆಯಲ್ಲಿ, ‘ಡೆಮಾಕ್ರಟಿಕ್‌ ಪೀಪಲ್ಸ್‌ ರಿಪಬ್ಲಿಕ್ ಆಫ್‌ ಕೊರಿಯಾ’ ಎಂದು ಇಂಗ್ಲಿಷ್‌ನಲ್ಲಿ ಪರಿಚಯಿಸಲಾಯಿತು. ಇದು ಉತ್ತರ ಕೊರಿಯಾದ ಅಧಿಕೃತ ಹೆಸರು. ದಕ್ಷಿಣ ಕೊರಿಯಾದ ಅಧಿಕೃತ ಹೆಸರು ‘ರಿಪಬ್ಲಿಕ್‌ ಆಫ್‌ ಕೊರಿಯಾ’.

ಆದರೆ ಉತ್ತರ ಕೊರಿಯಾವನ್ನು ಸರಿಯಾಗಿಯೇ ಪರಿಚಯಿಸಲಾಯಿತು.

ADVERTISEMENT

‘ಉದ್ಘಾಟನಾ ಸಮಾರಂಭದಲ್ಲಿ ಪ್ರಸಾರ ಮಾಡುವಾಗ, ದಕ್ಷಿಣ ಕೊರಿಯಾ ತಂಡವನ್ನು ತಪ್ಪಾಗಿ ಪರಿಚಯಿಸಿದ್ದಕ್ಕೆ ನಾವು ಕ್ಷಮಾಪಣೆ ಕೇಳುತ್ತೇವೆ’ ಎಂದು ಕೊರಿಯನ್ ಭಾಷೆಯಲ್ಲಿ ಐಒಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಾಕಿದೆ.

ಈ ಅಚಾತುರ್ಯಕ್ಕೆ ದಕ್ಷಿಣ ಕೊರಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಬಗ್ಗೆ ದಕ್ಷಿಣ ಕೊರಿಯಾದ ಸಂಸ್ಕೃತಿ ಉಪ ಸಚಿವ ಜಾಂಗ್ ಮಿ ರಾನ್ ಅವರು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಜೊತೆ ಚರ್ಚೆಗೆ ವಿನಂತಿಸಿದರು ಎಂದು ಸಚಿವಾಲಯ ತಿಳಿಸಿದೆ. ಫ್ರೆಂಚ್‌ ಸರ್ಕಾರದ ಜೊತೆ ಸರ್ಕಾರದ ಮಟ್ಟದಲ್ಲಿ ದೂರು ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೂ ಸೂಚಿಸಿದೆ.

ಮುಂದೆ ಇಂಥ ಪ್ರಸಂಗಗಳಾದಂತೆ ಕ್ರಮವಹಿಸಲು ದಕ್ಷಿಣ ಕೊರಿಯಾ ಒಲಿಂಪಿಕ್‌ ಸಮಿತಿ ಪ್ರತ್ಯೇಕವಾಗಿ ಪ್ಯಾರಿಕ್‌ ಕ್ರೀಡೆಗಳ ಆಯೋಜಕರಿಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.