ADVERTISEMENT

ಚುನಾವಣೆ ನಡೆಸದಿದ್ದರೆ ಅಮಾನತು ಕ್ರಮ: ಐಒಸಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 12:52 IST
Last Updated 9 ಸೆಪ್ಟೆಂಬರ್ 2022, 12:52 IST

ನವದೆಹಲಿ: 'ಡಿಸೆಂಬರ್‌ ಒಳಗಾಗಿ ಚುನಾವಣೆ ನಡೆಸದಿದ್ದರೆ ಅಮಾನತು ಕ್ರಮ ಜರುಗಿಸಲಾಗುವುದು’ ಎಂದು ಭಾರತ ಒಲಿಂಪಿಕ್‌ ಸಂಸ್ಥೆಗೆ (ಐಒಎ), ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಎಚ್ಚರಿಸಿದೆ.

ಸ್ವಿಟ್ಜರ್‌ಲೆಂಡ್‌ನ ಲಾಸನ್‌ನಲ್ಲಿ ಗುರುವಾರ ನಡೆದ ಐಒಸಿ ಆಡಳಿತ ಮಂಡಳಿ ಸಭೆಯಲ್ಲಿ ಸಮಿತಿಯು ಈ ನಿಲುವು ತೆಗೆದುಕೊಂಡಿದೆ.

‘ಅಂತರಿಕ ಕಚ್ಚಾಟದಿಂದ ಐಒಎ ಆಡಳಿತದಲ್ಲಿ ಗೊಂದಲ ಉಂಟಾಗಿರುವುದು ಮತ್ತು ಈ ಪ್ರಕರಣ ನ್ಯಾಯಾಲಯದಲ್ಲಿರುವುದು ಐಒಸಿ ಗಮನಕ್ಕೆ ಬಂದಿದೆ. ಆದ್ದರಿಂದ ಅಂತಿಮ ಎಚ್ಚರಿಕೆ ನೀಡಲು ನಿರ್ಧರಿಸಿದೆ. ಐಒಸಿಯ ಮುಂದಿನ ಆಡಳಿತ ಮಂಡಳಿ ಸಭೆ 2022ರ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಚುನಾವಣೆ ನಡೆಸದಿದ್ದರೆ ತಕ್ಷಣದಿಂದಲೇ ಅಮಾನತು ಕ್ರಮ ಜರುಗಿಸಲಾಗುವುದು’ ಎಂದು ಐಒಎಗೆ ಬರೆದ ಪತ್ರದಲ್ಲಿ ತಿಳಿಸಿದೆ.

ADVERTISEMENT

‘ಹೊಸ ಆಡಳಿತ ಬರುವವರೆಗೆ ಐಒಸಿಯು ಐಒಎ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಅವರೊಂದಿಗೆ ಮಾತ್ರ ಅಧಿಕೃತವಾಗಿ ಸಂವಹನ ನಡೆಸಲಿದೆ. ಹಂಗಾಮಿ ಅಧ್ಯಕ್ಷರನ್ನು ನೇಮಿಸಿದರೆ ಅವರನ್ನು ಅಂಗೀಕರಿಸುವುದಿಲ್ಲ’ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.