ADVERTISEMENT

ಬಾಕ್ಸರ್‌ಗಳ ವಿರುದ್ಧ ದ್ವೇಷಭಾಷಣ: ಐಒಸಿ ಅಧ್ಯಕ್ಷ ಆಕ್ಷೇಪ

ಎಪಿ
Published 3 ಆಗಸ್ಟ್ 2024, 16:13 IST
Last Updated 3 ಆಗಸ್ಟ್ 2024, 16:13 IST
   

ಪ್ಯಾರಿಸ್‌: ಬಾಕ್ಸರ್‌ಗಳಾದ ಇಮಾನೆ ಖೆಲಿಫ್ ಮತ್ತು ಲಿನ್ ಯು–ಟಿಂಗ್ ಅವರ ವಿರುದ್ಧ ಕೇಳಿಬರುತ್ತಿರುವ ‘ದ್ವೇಷದ ಮಾತು’ಗಳು ಯಾವುದೇ ಕಾರಣಕ್ಕೆ ಸಮ್ಮತಾರ್ಹವಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್‌ ಬಾಕ್‌ ತೀಕ್ಷ್ಣವಾಗಿ ಹೇಳಿದ್ದಾರೆ.

‘ರಾಜಕೀಯ ಪ್ರೇರಿತ... ಸಾಂಸ್ಕೃತಿಕ ಸಮರದಲ್ಲಿ ನಾವು ಭಾಗಿಯಾಗವುದಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 26ರಂದು ಆರಂಭವಾದ ಪ್ಯಾರಿಸ್‌ ಒಲಿಂಪಿಕ್ಸ್‌ ಈಗ ಅರ್ಧ ಹಾದಿ ಕ್ರಮಿಸಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಸೂಚಿ ಆಧಾರಿತ ದ್ವೇಷ ಮತ್ತು ನಿಂದನೆಯ ಮಾತುಗಳು ಕೇಳಿಬಂದಿವೆ. ಇದು ಯಾವುದೇ ಕಾರಣಕ್ಕೆ ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.

ADVERTISEMENT

ಅಲ್ಜೀರಿಯಾದ ಖೆಲಿಫ್ ಮತ್ತು ತೈವಾನ್‌ನ ಲಿನ್ ಅವರ ಡಿಎನ್‌ಎ ಪರೀಕ್ಷೆಯ ವೇಳೆ ಪುರುಷರ ಕ್ರೋಮೋಸೋಮ್‌ ಅಂಶಗಳು ಕಂಡುಬಂದಿದ್ದವು. ಇದೇ ಕಾರಣಕ್ಕೆ ಅವರನ್ನು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ದೆಹಲಿಯಲ್ಲಿ 16 ತಿಂಗಳ ಹಿಂದೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ ವೇಳೆ ಅನರ್ಹಗೊಳಿಸಿತ್ತು.

ಆದರೆ ಐಒಸಿ ಅವರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಸ್ಪರ್ಧೆಯನ್ನು ಐಒಸಿ ನಡೆಸುತ್ತಿದೆ. ಟೋಕಿಯೊದಲ್ಲೂ ಐಒಸಿಯೇ ಬಾಕ್ಸಿಂಗ್‌ ಸ್ಪರ್ಧೆ ನಡೆಸಿತ್ತು.  ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ವಿಫಲವಾಗಿರುವ ಕಾರಣ ರಷ್ಯಾ ನೇತೃತ್ವದ ಬಾಕ್ಸಿಂಗ್ ಸಂಸ್ಥೆ (ಐಬಿಎ)ಯನ್ನು ಐಒಸಿ ಮಾನ್ಯಮಾಡಿಲ್ಲ.

ಖೆಲಿಫ್ ಅವರಿಗೆ ಆನ್‌ಲೈನ್‌ನಲ್ಲಿ ಶೋಷಣೆಯಾಗುತ್ತಿದೆ ಎಂದು ಪ್ರತಿಭಟೆಸಿ ಅಲ್ಜೀರಿಯಾ ಒಲಿಂಪಿಕ್‌ ಮತ್ತು ಕ್ರೀಡಾ ಸಮಿತಿ ಐಒಸಿಗೆ ಶನಿವಾರ ಅಧಿಕೃತವಾಗಿ ದೂರು ಸಲ್ಲಿಸಿದೆ.

66 ಕೆ.ಜಿ. ವಿಭಾಗದ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಖೆಲಿಫ್‌ ಪ್ರಹಾರ ತಾಳಲಾರದೇ ಕೇವಲ 46 ಸೆಕೆಂಡುಗಳಲ್ಲಿ ಸೆಣಸಾಟ ತ್ಯಜಿಸಿ ಕಣ್ಣೀರು ಹಾಕಿದ್ದ ಇಟಲಿಯ ಏಂಜೆಲಾ ಕ್ಯಾರಿನಿ ಅವರಿಗೆ ಉದ್ಯಮಿ ಎಲಾನ್ ಮಸ್ಕ್‌, ಲೇಖಕಿ ಜೆ.ಕೆ.ರೋಲಿಂಗ್ ಸೇರಿದಂತೆ ಹಲವು ಖ್ಯಾತನಾಮರು ಶುಕ್ರವಾರ ಬೆಂಬಲ ಸೂಚಿಸಿದ್ದರು.

ಪ್ರಕರಣಕ್ಕೆ ತುಪ್ಪ ಸುರಿದ ಐಬಿಎ

ಇದೇ ವೇಳೆ, ಖೆಲಿಫಾ ಎದುರು ಗುರುವಾರ ಸೋತಿದ್ದ ಇಟಲಿಯ ಬಾಕ್ಸರ್‌ ಏಂಜೆಲಾ ಕ್ಯಾರಿನಿ ಅವರಿಗೆ ಒಂದು ಲಕ್ಷ ಡಾಲರ್ (₹83.75 ಲಕ್ಷ) ನೀಡುವುದಾಗಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಪ್ರಕಟಿಸಿ, ವಿವಾದಕ್ಕೆ ತುಪ್ಪಸುರಿದಿದೆ. 

ಬಾಕ್ಸಿಂಗ್‌ನ ಪ್ರತಿ ವಿಭಾಗದಲ್ಲಿ ಚಿನ್ನ ಗೆದ್ದವರಿಗೆ 1 ಲಕ್ಷ ಡಾಲರ್‌ ನೀಡುವುದಾಗಿ ಸಂಸ್ಥೆ ಎರಡು ತಿಂಗಳ ಹಿಂದೆ ಪ್ರಕಟಿಸಿತ್ತು.

ತಂದೆಯ ಅಸಮಾಧಾನ:

ಇದೇ ವೇಳೆ, ಅಲ್ಜೀರಿಯಾದ ಟಿಯಾರೆಟ್‌ನಿಂದ ಮಾತನಾಡಿರುವ ಇಮಾನೆ ತಂದೆ ಅಮರ್‌ ಖೆಲಿಫ್‌, ‘ನನ್ನ ಮಗಳು ಕುಟುಂಬಕ್ಕೆ ಗೌರವ ತಂದವಳು. ಅವಳ ವಿರುದ್ಧ ನಡೆಯುತ್ತಿರುವ ವಾಗ್ದಾಳಿ ಅನೈತಿಕವಾದುದು’ ಎಂದು ಟೀಕಿಸಿದ್ದಾರೆ.

ಅಲ್ಜೀರಿಯಾ ರಾಜಧಾನಿ ಅಲ್ಜೀರ್ಸ್‌ನಿಂದ ಸುಮಾರು 300 ಕಿ.ಮಿ. ದೂರವಿರುವ ಹಳ್ಳಿಯಲ್ಲಿ ಹುಟ್ಟಿರುವ ಇಮಾನೆ, ಕಟ್ಟಾ ಸಾಂಪ್ರದಾಯಿಕ ದೇಶದಲ್ಲಿ ಬಾಕ್ಸಿಂಗ್‌ಗೆ ಬರಲು ಹಲವು ಅಡೆತಡೆ ಎದುರಿಸಬೇಕಾಯಿತು.

ಈ ಮಧ್ಯೆ ಎಎಫ್‌ಪಿ ಜೊತೆ ಮಾತನಾಡಿರುವ ಇಮಾನೆ ‘ನಾನು ದೇಶದ ಹೆಣ್ಣು ಮಕ್ಕಳಿಗೆ ಮತ್ತು ಪುಟ್ಟ ಮಕ್ಕಳಿಗೆ ಸ್ಪೂರ್ತಿಯಾಗಲು ಬಯಸಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.