ಲುಸಾನ್: ಅಮಾನತುಗೊಂಡಿರುವ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಜೊತೆ ರಾಷ್ಟ್ರೀಯ ಫೆಡರೇಷನ್‌ಗಳು ಗುರುತಿಸಿಕೊಳ್ಳುವುದನ್ನು ಮುಂದುವರಿಸಿದರೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಿಂದ ಬಾಕ್ಸಿಂಗ್ ಹೊರಗಿಡುವುದಾಗಿ ಐಒಸಿ ಎಚ್ಚರಿಸಿದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಬಿಕ್ಕಟ್ಟು ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ), 2019ರಲ್ಲಿ ಐಬಿಎ ಮಾನ್ಯತೆ ರದ್ದುಗೊಳಿಸಿದೆ. ಸಂಸ್ಥೆಯಲ್ಲಿ ಹಣಕಾಸು ಅವ್ಯವಹಾರ, ಆಡಳಿತದಲ್ಲಿ ಸಮಸ್ಯೆ, ವಿಶ್ವಾಸಾರ್ಹತೆ ಕೊರತೆಯ ಕಾರಣಗಳನ್ನು ನೀಡಿ ಈ ಕ್ರಮ ಕೈಗೊಂಡಿದೆ.
ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯೇ, ಬಾಕ್ಸಿಂಗ್ ಅರ್ಹತಾ ಟೂರ್ನಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಟೋಕಿಯೊ ಒಲಿಂಪಿಕ್ಸ್ ಸಂದರ್ಭದಲ್ಲೂ ಬಾಕ್ಸಿಂಗ್ ಅರ್ಹತಾ ಟೂರ್ನಿಗಳನ್ನು ನಡೆಸುವಾಗ ಐಬಿಎಯನ್ನು ದೂರವಿಡಲಾಗಿತ್ತು.
2028ರ ಒಲಿಂಪಿಕ್ಸ್‌ಗೆ ಬಾಕ್ಸಿಂಗ್ ಸೇರ್ಪಡೆಯನ್ನು ಸದ್ಯ ತಡೆಹಿಡಿಯಲಾಗಿದೆ ಎಂದು ಮಂಗಳವಾರ ನಡೆದ ಐಒಸಿ ಕಾರ್ಯನಿರ್ವಾಹಕ ಮಂಡಳಿ ಸಭೆಯ ನಂತರ ಐಒಸಿ ಕ್ರೀಡಾ ನಿರ್ದೇಶಕ ಕಿಟ್ ಮೆಕ್ಕಾನೆಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಫೆಡರೇಷನ್‌ಗಳ ಬೆಂಬಲ ಪಡೆದು ಹೊಸ ಅಂತರರಾಷ್ಟ್ರೀಯ ಸಂಸ್ಥೆ ರೂಪುಗೊಳ್ಳದಿದ್ದಲ್ಲಿ ನಾವು ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಸೇರ್ಪಡೆಗೊಳಿಸುವ ಸ್ಥಿತಿಯಲ್ಲಿರುವುದಿಲ್ಲ ಎಂದರು.
ಇದೇ ವೇಳೆ, ತನ್ನ ವಿರುದ್ಧ ಮಾನ್ಯತೆ ಹಿಂಪಡೆದಿರುವ ಐಒಸಿಯ ಕ್ರಮದ ವಿರುದ್ಧ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ, ಅಂತರರಾಷ್ಟ್ರೀಯ ಕ್ರೀಡಾ ನ್ಯಾಯ ಮಂಡಳಿಯ ಮೊರೆ ಹೋಗಿದೆ. ಈ ನ್ಯಾಯಮಂಡಳಿ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.