ADVERTISEMENT

‘ಶೂಟಿಂಗ್‌’ನಲ್ಲಿ ದಿವ್ಯಾ ಮಿಂಚು

ಪ್ರಜಾವಾಣಿ ವಿಶೇಷ
Published 27 ಮೇ 2023, 5:36 IST
Last Updated 27 ಮೇ 2023, 5:36 IST
ದಿವ್ಯಾ ಟಿ.ಎಸ್‌
ದಿವ್ಯಾ ಟಿ.ಎಸ್‌   

ಮಹಮ್ಮ ದ್‌ ನೂಮಾನ್

ಶೂಟಿಂಗ್ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡ ಆರೇಳು ವರ್ಷಗಳಲ್ಲೇ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿರುವ ದಿವ್ಯಾ ಟಿ.ಎಸ್‌ ಅವರದ್ದು ಅಮೋಘ ಸಾಧನೆಯೇ ಸರಿ. ಬೆಂಗಳೂರಿನ ದಿವ್ಯಾ, ಅಜರ್‌ಬೈಜಾನ್‌ನ ಬಾಕುವಿನಲ್ಲಿ ಈಚೆಗೆ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.

ದಿವ್ಯಾ ಅವರಿಗೆ ಹರಿಯಾಣದ ಸರಬ್ಜೋತ್‌ ಸಿಂಗ್‌ ಸಾಥ್‌ ನೀಡಿದ್ದರು. 55 ದೇಶಗಳ ತಂಡಗಳು ಪಾಲ್ಗೊಂಡಿದ್ದ ಕಣದಲ್ಲಿ ದಿವ್ಯಾ–‍ ಸರಬ್ಜೋತ್‌ ಜೋಡಿ ಚಿನ್ನದೆಡೆಗೆ ಗುರಿಯಿಟ್ಟಿತ್ತು. ದಿವ್ಯಾ ಅವರು ಅಲ್ಪ ಸಮಯದಲ್ಲೇ ವಿಶ್ವಕಪ್ ಚಿನ್ನ ಗೆಲ್ಲುವಷ್ಟರ ಮಟ್ಟಿಗೆ ಬೆಳೆದು ನಿಂತದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಸಾಧನೆಯ ಹಿಂದೆ ಅವರ ಕಠಿಣ ಅಭ್ಯಾಸ, ಪರಿಶ್ರಮ ಅಡಗಿದೆ.

ADVERTISEMENT

ಸಾಧನೆಯ ಆರಂಭದ ಹೆಜ್ಜೆಗಳು

ಅಂದ ಹಾಗೆ ದಿವ್ಯಾ ಎಳೆ ವಯಸ್ಸಿನಲ್ಲೇ ಶೂಟಿಂಗ್ ಆಯ್ಕೆ ಮಾಡಿರಲಿಲ್ಲ. ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿದ್ದರು. 19ನೇ ವಯಸ್ಸಿನಲ್ಲಿ ಶೂಟಿಂಗ್ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡರು. ‘ಬ್ಯಾಸ್ಕೆಟ್‌ಬಾಲ್‌ನಂತಹ ’ತಂಡ ಕ್ರೀಡೆ’ಯಲ್ಲಿ ಯಶಸ್ಸು ಸಾಧಿಸಲು ಇತಿಮಿತಿಗಳಿರುತ್ತವೆ. ವೈಯಕ್ತಿಕ ಕ್ರೀಡೆಯಲ್ಲಿ ಸಾಧನೆಗೆ ಹೆಚ್ಚಿನ ಅವಕಾಶಗಳಿರುತ್ತವೆ’ ಎಂದು ಶೂಟಿಂಗ್‌ ಆಯ್ಕೆ ಮಾಡಿಕೊಂಡ ಹಿಂದಿನ ಕಾರಣ ವಿವರಿಸುತ್ತಾರೆ ದಿವ್ಯಾ.

‘ಶೂಟಿಂಗ್‌ನಲ್ಲಿ ವೃತ್ತಿಜೀವನವನ್ನು ತುಂಬಾ ದೀರ್ಘವಾಗಿಸಬಹುದು. ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಕಾಪಾಡಿಕೊಂಡರೆ ಈ ಕ್ರೀಡೆಯಲ್ಲಿ 40ರ ವಯಸ್ಸಿನಲ್ಲೂ ಪದಕ ಗೆಲ್ಲಬಹುದು. ಇದೇ ಕಾರಣದಿಂದ ಶೂಟಿಂಗ್‌ನತ್ತ ಗಮನಹರಿಸಿದೆ’ ಎನ್ನುತ್ತಾರೆ ಅವರು.

2016 ರಲ್ಲಿ ರಾಜ್ಯಮಟ್ಟದ ಸರ್ಧೆಗಳಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದ ಅವರು, 2018ರ ಬಳಿಕವಷ್ಟೇ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದ್ದರು. ವೃತ್ತಿಪರ ಶೂಟರ್‌ ಆಗಬೇಕು ಎಂದು ನಿರ್ಧರಿಸಿದ ಬೆನ್ನಲ್ಲೇ ಕೋವಿಡ್‌ ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿಸಿತು. ಇದರಿಂದ ಸುಮಾರು ಎರಡು ವರ್ಷ ಯಾವುದೇ ಸ್ಪರ್ಧೆಗಳು ನಡೆಯಲಿಲ್ಲ. ಅಭ್ಯಾಸ ನಡೆಸಲೂ ಆಗಲಿಲ್ಲ. ಕೋವಿಡ್‌ ದೂರವಾದ ಬಳಿಕ ಸತತ ತರಬೇತಿ ನಡೆಸಿ ಯಶಸ್ಸುಗಳಿಸಿದ್ದಾರೆ.

ಉತ್ತಮ ತರಬೇತಿ

ಆರಂಭದ ದಿನಗಳಲ್ಲಿ ಕೋಚ್‌ ಮಂಜುನಾಥ್‌ ಪಟಗಾರ್ ಅವರಿಂದ ತರಬೇತಿ ಪಡೆದ ದಿವ್ಯಾ, ಬಹಳ ಬೇಗನೇ ಈ ಕ್ರೀಡೆಯ ಕೌಶಲಗಳನ್ನು ಕರಗತಮಾಡಿ ಕೊಂಡರು. ಒಬ್ಬ ಶೂಟರ್‌ ಆಗಲು ಬೇಕಾದ ಪ್ರತಿಭೆ ಇವರಲ್ಲಿದೆ ಎಂಬುದನ್ನು ಗುರುತಿಸಿ ಪ್ರೋತ್ಸಾಹ ಕೊಟ್ಟದ್ದು ಮಂಜುನಾಥ್‌.

ರಾಷ್ಟ್ರೀಯ ಶಿಬಿರಗಳು ಮತ್ತು ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ಎಸ್‌ಎಐ ಹಾಗೂ ರಾಷ್ಟ್ರೀಯ ತಂಡದ ಕೋಚ್‌ಗಳ ಮಾರ್ಗದರ್ಶನ ಲಭಿಸಿತು. ಇದರಿಂದ ದಿವ್ಯಾಗೆ ಕಡಿಮೆ ಅವಧಿಯಲ್ಲೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ.

ಹುರುಪು ನೀಡಿದ ‘ಚಿನ್ನ’

ಕಳೆದ ವರ್ಷ ಡಿಸೆಂಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ 65 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದಿವ್ಯಾ ಚಿನ್ನ ಜಯಿಸಿ ದ್ದರು. ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದು ಛಾಪು ಮೂಡಿಸಿದ್ದ ರಿದಮ್ ಸಾಂಗ್ವಾನ್, ಇಶಾ ಸಿಂಗ್ ಮತ್ತು ಮನು ಭಾಕರ್ ಅಂತಹ ಸ್ಪರ್ಧಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದರು.‌ ಆ ಪದಕವು ಅವರಿಗೆ ಹೊಸ ಹುರುಪು ನೀಡಿತ್ತು. ‘ವಿಶ್ವಮಟ್ಟದ ಶೂಟರ್‌ಗಳು ಸ್ಪರ್ಧಿಸಿದ್ದ ಕೂಟದಲ್ಲಿ ಯಶಸ್ವಿಯಾಗಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಅದರಿಂದ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು' ಎನ್ನುತ್ತಾರೆ ದಿವ್ಯಾ.

ಮೂರನೇ ವಿಶ್ವಕಪ್‌ ಯಶಸ್ಸು

ಕೈರೊ ಮತ್ತು ಭೋಪಾಲ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ್ದ ದಿವ್ಯಾಗೆ ಪದಕ ಸಿಕ್ಕಿರಲಿಲ್ಲ. ಆಗ, ವೈಯಕ್ತಿಕ ವಿಭಾಗದಲ್ಲಿ ಕ್ರಮವಾಗಿ ಏಳು ಹಾಗೂ ಐದನೇ ಸ್ಥಾನಗಳಿಸಿದ್ದರು. ತಂಡ ವಿಭಾಗದಲ್ಲೂ ಪದಕದೆಡೆಗೆ ಗುರಿಯಿಡಲು ಆಗಿರಲಿಲ್ಲ. ಆದರೆ, ಪಶ್ಚಿಮ ಯೂರೋಪ್‌ನ ಅಜರ್‌ಬೈಜಾನ್‌ ಗಣರಾಜ್ಯದ ಬಾಕುವಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದರು. ಇದು ಅವರಿಗೆ ಮೂರನೇ ವಿಶ್ವಕಪ್‌. ‘ವಿಶ್ವದ ಘಟಾನುಘಟಿ ಶೂಟರ್‌ಗಳ ಜತೆ ಪೈಪೋಟಿ ನಡೆಸಿ ಚಿನ್ನ ಗೆಲ್ಲಲು ಸಾಧ್ಯವಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಲಿದೆ’ ಎಂಬುದು ಅವರ ಆತ್ಮವಿಶ್ವಾಸದ ನುಡಿ.

ಮುಂದೆ 25 ಮೀ. ಪಿಸ್ತೂಲ್‌ ವಿಭಾಗದಲ್ಲೂ ವಿಶ್ವಕಪ್‌ನಲ್ಲಿ ಪದಕ ಗೆಲ್ಲುವ ಗುರಿ ಅವರದ್ದು. ಕಾನೂನು ವಿಷಯ ವ್ಯಾಸಂಗ (ಎಲ್‌ಎಲ್‌ಎಂ) ಮಾಡುತ್ತಿರುವ ದಿವ್ಯಾ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೆಲ ಕಾಲ ತಯಾರಿ ನಡೆಸಿದ್ದರು. ಅದರ ನಡುವೆಯೇ ಶೂಟಿಂಗ್‌ ರೇಂಜ್‌ನಲ್ಲಿ ನಿಖರ ಗುರಿ ಹಿಡಿದು ಹೊಸ ಎತ್ತರಕ್ಕೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.