ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್: ಹಜಾರಿಕಾ, ನ್ಯಾನ್ಸಿಗೆ ಬೆಳ್ಳಿ

ಪಿಟಿಐ
Published 12 ಮೇ 2023, 15:41 IST
Last Updated 12 ಮೇ 2023, 15:41 IST
ನ್ಯಾನ್ಸಿ
ನ್ಯಾನ್ಸಿ   

ಬಾಕು, ಅಜರ್‌ಬೈಜಾನ್: ಭಾರತದ ಹೃದಯ್‌ ಹಜಾರಿಕಾ ಮತ್ತು ನ್ಯಾನ್ಸಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 10 ಮೀ. ಏರ್‌ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು.

ಇಬ್ಬರಿಗೂ ಸೀನಿಯರ್ ವಿಭಾಗದಲ್ಲಿ ಲಭಿಸಿದ ಮೊದಲ ಪದಕ ಇದು. ಜೂನಿಯರ್‌ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಆಗಿರುವ ಅಸ್ಸಾಂನ ಹೃದಯ್‌, ಪುರುಷರ ವಿಭಾಗದಲ್ಲಿ ಶುಕ್ರವಾರ ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಹಂಗರಿಯ ಝಲಾನ್ ಪೆಕ್ಲರ್‌ ಎದುರು ಮಣಿದರು. ಝಲಾನ್‌ ಅವರು 252.4 ಪಾಯಿಂಟ್ಸ್‌ ಕಲೆಹಾಕಿದರೆ, ಭಾರತದ ಶೂಟರ್‌ 251.9 ಪಾಯಿಂಟ್ಸ್‌ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಹರಿಯಾಣದ ನ್ಯಾನ್ಸಿ ಅವರು ಚೀನಾದ ಹಾನ್‌ ಜಿಯಾವು ಎದುರು ಅಲ್ಪ ಅಂತರದಲ್ಲಿ ಪರಾಭವಗೊಂಡರು. ಹಾನ್‌ 254.0 ಪಾಯಿಂಟ್ಸ್‌ಗಳೊಂದಿಗೆ ಚಿನ್ನ ಗೆದ್ದರೆ, ನ್ಯಾನ್ಸಿ 253.3 ಪಾಯಿಂಟ್ಸ್‌ ಕಲೆಹಾಕಿದರು. ಕೊನೆಯ ಎರಡು ಅವಕಾಶಗಳು ಬಾಕಿಯಿದ್ದಾಗ ನ್ಯಾನ್ಸಿ 0.1 ಪಾಯಿಂಟ್ಸ್‌ಗಳಿಂದ ಮುಂದಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ನಿಖರ ಗುರಿ ಹಿಡಿಯಲು ಸಾಧ್ಯವಾಗಲಿಲ್ಲ.

ADVERTISEMENT

ನ್ಯಾನ್ಸಿ ಅವರು ಅರ್ಹತಾ ಸುತ್ತಿನಲ್ಲಿ 631.6 ಪಾಯಿಂಟ್ಸ್‌ಗಳನ್ನು ಪಡೆದು ಏಳನೆಯವರಾಗಿ ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರು. ಕಣದಲ್ಲಿದ್ದ ಭಾರತದ ಇತರ ಶೂಟರ್‌ಗಳಾದ ರಮಿತಾ (631.4) ಮತ್ತು ತಿಲೋತ್ತಮ ಸೇನ್‌ (629.7) ಅವರು ಕ್ರಮವಾಗಿ ಒಂಬತ್ತು ಮತ್ತು 15ನೇ ಸ್ಥಾನ ಪಡೆದರು.

ಪುರುಷರ ವಿಭಾಗದಲ್ಲಿ ಕಂಚಿನ ಪದಕ ಪಡೆದ ಚೀನಾದ ಶೆಂಗ್‌ ಲಿಹಾವೊ ಅವರು 637.9 ಪಾಯಿಂಟ್ಸ್‌ಗಳೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರಲ್ಲದೆ, ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆ ಉತ್ತಮಪಡಿಸಿಕೊಂಡರು. ಹೃದಯ್‌ (630.3) ಅವರು ಏಳನೆಯವರಾಗಿ ಅಂತಿಮ ಸುತ್ತು ಪ್ರವೇಶಿಸಿದ್ದರು.

ಇನ್ನೂ ಎರಡು ದಿನಗಳ ಸ್ಪರ್ಧೆಗಳು ಬಾಕಿಯಿದ್ದು 2 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳೊಂದಿಗೆ ಚೀನಾ ಅಗ್ರಸ್ಥಾನದಲ್ಲಿದೆ. 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಜಯಿಸಿರುವ ಭಾರತ ತಂಡ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಹೃದಯ್‌ ಹಜಾರಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.