ADVERTISEMENT

ಭಾರತದ ಜಿಮ್ನಾಸ್ಟಿಕ್ಸ್‌ನ ಪ್ರಖರ ಬೆಳಕು ದೀಪಾ: ‘ಪ್ರೊಡೊನೊವಾ ರಾಣಿ’ ನಿವೃತ್ತಿ

ಕ್ರೀಡೆಗೆ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಗಳಿಸಿದ್ದ ತಾರೆ

ಪಿಟಿಐ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
<div class="paragraphs"><p>2016ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದಿದ್ದ&nbsp; ಒಲಿಂಪಿಕ್ಸ್‌ ಕೂಡದ ಮಹಿಳೆಯರ ಜಿಮ್ನಾಸ್ಟಿಕ್ಸ್‌ನ&nbsp; ವಾಲ್ಟ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ದೀಪಾ ಕರ್ಮಾಕರ್&nbsp; </p></div>

2016ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದಿದ್ದ  ಒಲಿಂಪಿಕ್ಸ್‌ ಕೂಡದ ಮಹಿಳೆಯರ ಜಿಮ್ನಾಸ್ಟಿಕ್ಸ್‌ನ  ವಾಲ್ಟ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ದೀಪಾ ಕರ್ಮಾಕರ್ 

   

–ಪ್ರಜಾವಾಣಿ ಚಿತ್ರ / ಕೆ.ಎನ್. ಶಾಂತಕುಮಾರ್

ನವದೆಹಲಿ: ಒಲಿಂಪಿಕ್ ಕೂಟದ ಮಹಿಳೆಯರ ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಭಾರತದ ಮೊಟ್ಟಮೊದಲ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ.

ADVERTISEMENT

ಜಿಮ್ನಾಸ್ಟಿಕ್ಸ್‌ನಲ್ಲಿ ಅತ್ಯಂತ ಕಠಿಣ ವಿಭಾಗವಾದ ಪ್ರೊಡೊನೊವಾ ವಾಲ್ಟ್‌ನಲ್ಲಿ ಅವರು ಸಾಧನೆ ಮೆರೆದಿದ್ದರು. ಅದಕ್ಕಾಗಿಯೇ ಅವರನ್ನು ‘ಪ್ರೊಡೊನೊವಾ ರಾಣಿ’ ಎಂದೇ ಕರೆಯಲಾಗುತ್ತದೆ.

‘ಬಹಳಷ್ಟು ಚಿಂತನ–ಮಂಥನ ನಡೆಸಿದ ನಂತರ ಸ್ಪರ್ಧಾತ್ಮಕ ಜಿಮ್ನಾಸ್ಟಿಕ್ಸ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಈ ತೀರ್ಮಾನ ಕೈಗೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಇದು ನಿವೃತ್ತಿಗೆ ಸಕಾಲ ಎಂಬ ಅರಿವು ನನಗಿದೆ’ ಎಂದು  ತ್ರಿಪುರಾದ 31 ವರ್ಷ ವಯಸ್ಸಿನ ದೀಪಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಅವರು ಮಹಿಳೆಯರ ವಿಭಾಗದ ವಾಲ್ಟ್‌ನಲ್ಲಿ ಫೈನಲ್ ತಲುಪಿ ಚಾರಿತ್ರಿಕ ಸಾಧನೆ ಮಾಡಿದ್ದರು. 0.15 ಅಂಕಗಳ ಅಂತರದಿಂದ ಅವರಿಗೆ ಅಂದು ಪದಕ ಕೈತಪ್ಪಿತ್ತು. 

‘ಜಿಮ್ನಾಸ್ಟಿಕ್ಸ್‌ ನನ್ನ ಜೀವನದ ಕೇಂದ್ರಬಿಂದುವಾಗಿದೆ. ಈ ಕ್ರೀಡೆಯಲ್ಲಿ ನಾನು ತೊಡಗಿಸಿಕೊಂಡ ಪ್ರತಿಕ್ಷಣವನ್ನೂ ಸದಾಕಾಲ ಸ್ಮರಿಸುತ್ತೇನೆ. ಈ ನಡುವೆ ಕಂಡ ಯಶಸ್ಸು, ವೈಫಲ್ಯಗಳು ಮತ್ತು  ವಿಭಿನ್ನ ಸನ್ನಿವೇಶಗಳಿಗೆ ನಾನು ಆಭಾರಿಯಾಗಿರುವ’ ಎಂದು ದೀಪಾ ಹೇಳಿದ್ದಾರೆ. 

ಜಿಮ್ನಾಸ್ಟ್ ಆಗಿ ತಾವು ಗಳಿಸಿದ ಅನುಭವವನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯಲು ನಿರ್ಧರಿಸಿದ್ದಾರೆ. ತರಬೇತುದಾರರಾಗಿ ಕಾರ್ಯನಿರ್ವಹಿಸುವ ಸಿದ್ಧತೆ ನಡೆಸಿದ್ದಾರೆ. 

‘ಯುವ ಜಿಮ್ನಸ್ಟ್‌ಗಳ ಕನಸು ನನಸು ಮಾಡಲು ಬೆಂಬಲಿಸುತ್ತೇನೆ’ ಎಂದಿದ್ದಾರೆ. 

ಅಗರ್ತಲಾದ ದೀಪಾ ಅವರು ‘ವಾಲ್ಟ್‌ ಆಫ್ ಡೆತ್’ ಎಂದೇ ಕರೆಯಲಾಗುವ ಪ್ರಕಾರದ ಕಸರತ್ತಿನಲ್ಲಿ ಪರಿಣತಿ ಗಳಿಸಿದ್ದರು. ಜಿಮ್ನಾಸ್ಟಿಕ್ಸ್‌ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಐವರು ಮಹಿಳೆಯರಲ್ಲಿ ಇವರೂ  ಒಬ್ಬರಾಗಿದ್ದಾರೆ. ಈ ವಿಭಾಗವು ಅತ್ಯಂತ ಕ್ಲಿಷ್ಟ ಮತ್ತು ಅಪಾಯಕಾರಿಯೂ ಹೌದು. ಜಿಮ್ನಾಸ್ಟ್‌ ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚು. ಎರಡು ಸೊಮರ್‌ಸಾಲ್ಟ್‌ಗಳು ಇರುವ ಕಸರತ್ತು ಇದು. 

‘ನನ್ನ ಜೀವನವನ್ನು ಹಿಂದಿರುಗಿ ಒಮ್ಮೆ ನೋಡಿದಾಗ ಮಾಡಿದ ಸಾಧನೆಗಳ ಬಗ್ಗೆ ಹೆಮ್ಮೆಯಾಗುತ್ತದೆ. ವಿಶ್ವಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಪದಕಗಳನ್ನು ಜಯಿಸಿದ್ದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ರಿಯೊ ಒಲಿಂಪಿಕ್ಸ್‌ನಲ್ಲಿ ಪ್ರೊಡೊನೊವಾ ವಾಲ್ಟ್‌ನಲ್ಲಿ ಸ್ಪರ್ಧಿಸಿದ್ದು ಅವಿಸ್ಮರಣೀಯವಾಗಿವೆ’ ಎಂದು ದೀಪಾ  ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

‘ಈ ಕ್ರೀಡೆಗಾಗಿ ನಾನು ಬೆವರು, ರಕ್ತ ಮತ್ತು ಕಣ್ಣೀರು ಹರಿಸಿರುವೆ. ಅದರೊಂದಿಗೆ ಮನದ ತುಂಬ ಅಮೋಘವಾದ ನೆನಪುಗಳನ್ನು ತುಂಬಿಕೊಂಡು ಹೊರನಡೆಯುತ್ತಿದ್ದೇನೆ. ಈ ಕ್ರೀಡೆಯು ನನಗೆ ಸಕಲವನ್ನೂ ನೀಡಿದೆ. ಜೀವನದ ಮಹತ್ವದ ಪಾಠಗಳನ್ನೂ ಕಲಿಸಿದೆ. ಕೋಚ್‌ಗಳು, ಸಹಪಾಠಿಗಳು, ನೆರವು ಸಿಬ್ಬಂದಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನೀವೆಲ್ಲ ಅಭಿಮಾನಿಗಳಿಗೆ ನಾನು ಆಭಾರಿಯಾಗಿರುವೆ’ ಎಂದು ದೀಪಾ ಹೇಳಿದ್ದಾರೆ.

ಪದ್ಮಶ್ರೀ, ಮೇಜರ್ ಧ್ಯಾನಚಂದ್ ಖೇಲ್‌ರತ್ನ ಮತ್ತು ಅರ್ಜುನ್ ಪ್ರಶಸ್ತಿಗಳು ಅವರಿಗೆ ಸಂದಿವೆ. 

ಚಪ್ಪಟೆ ಪಾದದ ಸಮಸ್ಯೆ ಮೀರಿದ ಛಲಗಾತಿ

ದೀಪಾ ಅವರಿಗೆ ಬಾಲ್ಯದಲ್ಲಿ ಚಪ್ಪಟೆ ಪಾದಗಳಿದ್ದವು. ಇದರಿಂದಾಗಿ ಅವರು ಜಿಮ್ನಾಸ್ಟಿಕ್ಸ್‌ ಮಾಡುವುದು ಕಷ್ಟವಾಗಿತ್ತು.  ಈ ಸಮಸ್ಯೆಯಿಂದಾಗಿ ಅವರ ಕನಸು ಕಮರುವ ಸಾಧ್ಯತೆ ಇತ್ತು.  ‘ನನಗಿನ್ನೂ ನೆನಪಿದೆ. ಆಗಿನ್ನೂ ನನಗೆ ಐದು ವರ್ಷಗಳು. ಚಪ್ಪಟೆ ಪಾದವಿರುವುದರಿಂದ ಜಿಮ್ನಾಸ್ಟ್ ಆಗುವುದು ಅಸಾಧ್ಯವೆಂದು ಹಲವರು ಹೇಳಿದ್ದರು’ ಎಂದು ದೀಪಾ ಉಲ್ಲೇಖಿಸಿದ್ದಾರೆ.  ಆದರೆ ದೀಪಾ ಆರು ವರ್ಷದ ಬಾಲಕಿಯಾಗಿದ್ದಾಗಲೇ ಜಿಮ್ನಾಸ್ಟಿಕ್ಸ್‌ ಕಲಿಕೆ ಆರಂಭಿಸಿದರು. ಸೋಮಾ ನಂದಿ ಮತ್ತು ವಿಶ್ವೇಶ್ವರ್ ನಂದಿ ಅವರ ಮಾರ್ಗದರ್ಶನದಲ್ಲಿ ಅವರು ತರಬೇತಿ ಪಡೆದರು. ದೀಪಾ ಅವರ ಕ್ರೀಡಾಜೀವನದುದ್ದಕ್ಕೂ ನಂದಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಅಂತರರಾಷ್ಟ್ರೀಯ ಪದಕ ಜಯಿಸಲು ದೀಪಾ ಅವರಿಗೆ ಪ್ರೇರಣೆ ತುಂಬಿದ್ದಾರೆ.  ಸೌಲಭ್ಯಗಳ ಕೊರತೆ ಇರುವ ಜಿಮ್ನಾಷಿಯಂಗಳಲ್ಲಿ ತರಬೇತಿ ಪಡೆದರು. ಹಲವು ಸವಾಲುಗಳನ್ನು ಎದುರಿಸಿ ರಿಯೊ ಒಲಿಂಪಿಕ್ಸ್‌ವರೆಗೆ ತಲುಪಿದ್ದೇ ದೊಡ್ಡ ಸಾಧನೆ.  2008ರಲ್ಲಿ ಅವರು ಜಲಪಾಯ್‌ಗುಡಿಯಲ್ಲಿ ಜೂನಿಯರ್ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ನಲ್ಲಿ ಗೆಲುವು ಸಾಧಿಸಿದ ನಂತರ ಅವರು ಸ್ಪರ್ಧಾತ್ಮಕ ಜಗತ್ತಿನ ಗಮನ ಸೆಳೆದರು.

2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ಆದರು.  2015ರಲ್ಲಿ ಏಷ್ಯನ್ ಚಾಂಪಿಯನ್‌ಷಿಪ್ ಕಂಚು ಮತ್ತು ಅದೇ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಪಡೆದರು.  ಆದರೆ ರಿಯೊ ಒಲಿಂಪಿಕ್ಸ್‌ ನಂತರ ಗಾಯದ ಸಮಸ್ಯೆ ಎದುರಿಸಿದರು. ಅದಕ್ಕೆ ಶಸ್ತ್ರಚಿಕಿತ್ಸೆಯೂ ಆಯಿತು. ಚೇತರಿಸಿಕೊಂಡ ನಂತರ  2018ರಲ್ಲಿ ಟರ್ಕಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾದರು. ಅದೇ ವರ್ಷ ಜರ್ಮನಿಯಲ್ಲಿ ವಿಶ್ವಕಪ್ ಸ್ಪರ್ಧೆಯಲ್ಲಿ ಕಂಚು ಗಳಿಸಿದರು.

2021ರಲ್ಲಿ ಅವರ ಜೀವನಕ್ಕೆ ಮತ್ತೊಂದು ತಿರುವು ಲಭಿಸಿತು. ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ಜಿಮ್ನಾಸ್ಟಿಕ್ಸ್‌ನಲ್ಲಿ ಚಿನ್ನ ಗೆದ್ದರು.  ಆದರೆ ಅದೇ ವರ್ಷ ಅವರು ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿದರು. ನಿಷೇಧಿತ ಹಿಗೆನಾಮೈನ್ ಅಂಶವಿರುವ ಮದ್ದು ಸೇವಿಸಿದ್ದು ಪರೀಕ್ಷೆಯಲ್ಲಿ ಖಚಿತವಾಯಿತು. ಇದಕ್ಕಾಗಿ ಎರಡು ವರ್ಷಗಳ ನಿಷೇಧವನ್ನು ಅವರ ಮೇಲೆ ಹಾಕಲಾಯಿತು. ಈ ಮದ್ದನ್ನು ಅಸ್ತಮಾ ಮತ್ತು ಕಫದ ತೊಂದರೆಯ ಚಿಕಿತ್ಸೆಗೂ ಬಳಸಲಾಗುತ್ತದೆ. 2023ರ ಜುಲೈನಲ್ಲಿ ಅವರ ಶಿಕ್ಷೆ ಪೂರ್ಣಗೊಂಡಿತು.  ಏನೇ ಆಗಲಿ; ದೀಪಾ ಅವರ ಕ್ರೀಡಾ ಜೀವನದಲ್ಲಿ ವಿವಾದಗಳಿಗಿಂತ ಹೆಚ್ಚು ಸಾಧನೆಗಳು ಸದ್ದು ಮಾಡಿರುವುದು ಗಮನಾರ್ಹ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.