ನವದೆಹಲಿ: ಭಾರತದ ಮೀರಾಬಾಯಿ ಚಾನು ಅವರ ಒಲಿಂಪಿಕ್ಸ್ ಅರ್ಹತೆಯನ್ನು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಫ್) ಶನಿವಾರ ದೃಢಪಡಿಸಿದೆ. ಮೀರಾಟೋಕಿಯೊ ಕೂಟದಲ್ಲಿ 49 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.
2017ರ ವಿಶ್ವ ಚಾಂಪಿಯನ್ ಆಗಿರುವ ಮೀರಾಬಾಯಿ, ಏಪ್ರಿಲ್‌ನಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಟೋಕಿಯೊ ಕೂಟಕ್ಕೆ ಅರ್ಹತೆ ಗಳಿಸಿದ್ದರು. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದರು. ರ‍್ಯಾಂಕಿಂಗ್ ಆಧಾರದಲ್ಲಿ ಅವರು ಟೋಕಿಯೊ ಕೂಟಕ್ಕೆ ಸ್ಥಾನ ಗಳಿಸಿದ್ದರು. ಅವರ ಅರ್ಹತೆಯನ್ನುಐಡಬ್ಲ್ಯುಎಫ್ ಈಗ ಖಚಿತಪಡಿಸಿದೆ. ಸದ್ಯ ತಾವು ಸ್ಪರ್ಧಿಸುವ 49 ಕೆಜಿ ವಿಭಾಗದಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.
‘ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ವೇಟ್‌ಲಿಫ್ಟರ್ ಮೀರಾಬಾಯಿ ಅವರಿಗೆ ಅಭಿನಂದನೆಗಳು. ಐಡಬ್ಲ್ಯುಎಫ್ ಪ್ರಕಟಿಸಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನ ಗಳಿಸಿದ್ದಾರೆ‘ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಟ್ವೀಟ್ ಮಾಡಿದೆ
ಮೀರಾಬಾಯಿ ಅವರು ಈ ಮೊದಲು ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಒಲಿಂಪಿಕ್ ಕೂಟದಿಂದ ಉತ್ತರ ಕೊರಿಯಾ ಹಿಂದೆ ಸರಿದಿದ್ದರಿಂದ ಬಡ್ತಿ ಪಡೆದಿದ್ದಾರೆ.
ಮಣಿಪುರದ ಮೀರಾ ಅವರಿಗೆ ಇದು ಎರಡನೇ ಒಲಿಂಪಿಕ್ಸ್. 2016ರ ರಿಯೊ ಕೂಟದಲ್ಲೂ ಅವರು ಸ್ಪರ್ಧಿಸಿದ್ದರು.
ಒಲಿಂಪಿಕ್ಸ್ ಅರ್ಹತೆ ಗಳಿಸಿದ ವೇಟ್‌ಲಿಫ್ಟರ್‌ಗಳ ಅಂತಿಮ ಪಟ್ಟಿಯನ್ನು ಇದೇ 25ರಂದು ಪ್ರಕಟಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.