ADVERTISEMENT

ಖೇಲೊ ಇಂಡಿಯಾ: ಸಂತಸದ ಅಲೆಯಲ್ಲಿ ಚಾಂಪಿಯನ್ನರ ಸಂಭ್ರಮ

ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟ: ಸಮಾರೋಪ ಸಮಾರಂಭಕ್ಕೆ ಕಲಾಕಾರ್ಯಕ್ರಮಗಳ ರಂಗು

ವಿಕ್ರಂ ಕಾಂತಿಕೆರೆ
Published 4 ಮೇ 2022, 4:01 IST
Last Updated 4 ಮೇ 2022, 4:01 IST
ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದ ಜೈನ್ ವಿವಿಯ ವಿದ್ಯಾರ್ಥಿಗಳ ಸಂಭ್ರಮ. ವಿವಿಯ ಕ್ರೀಡಾ ವಿಭಾಗದ ನಿರ್ದೇಶಕ ಶಂಕರ್ (ಮಧ್ಯದಲ್ಲಿ) ಇದ್ದಾರೆ -ಪ್ರಜಾವಾಣಿ ಚಿತ್ರ/ರಂಜು ಪಿ
ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದ ಜೈನ್ ವಿವಿಯ ವಿದ್ಯಾರ್ಥಿಗಳ ಸಂಭ್ರಮ. ವಿವಿಯ ಕ್ರೀಡಾ ವಿಭಾಗದ ನಿರ್ದೇಶಕ ಶಂಕರ್ (ಮಧ್ಯದಲ್ಲಿ) ಇದ್ದಾರೆ -ಪ್ರಜಾವಾಣಿ ಚಿತ್ರ/ರಂಜು ಪಿ   

ಬೆಂಗಳೂರು: ಭರತನಾಟ್ಯದ ಲಾಸ್ಯ, ಮೋಹಿನಿಯಾಟ್ಟಂನ ಸೊಬಗು, ಯಕ್ಷಗಾನದ ಧೀಂಗಿಣ–ಕುಣಿತ, ಕಥಕ್‌ನ ಥಕಥೈ ಅಲೆಯಲ್ಲಿ ಮುಳುಗೆದ್ದ ಕಂಠೀರವ ಕ್ರೀಡಾಂಗಣದಲ್ಲಿ ಜೈನ್ ವಿವಿ ಕ್ರೀಡಾಪಟುಗಳ ಸಂಭ್ರಮದ ಕಡಲು ಉಕ್ಕಿ ಹರಿಯಿತು.

ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದ ಆತಿಥೇಯ ಜೈನ್ ವಿವಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಏಳು ಪದಕಗಳ ಒಡೆಯ ಈಜುಪಟು ಶಿವ ಶ್ರೀಧರ್‌ ಟ್ರೋಫಿಯೊಂದಿಗೆ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಖುಷಿಯ ಅಲೆ ಎದ್ದಿತು. ಕುಣಿದು ಕುಪ್ಪಳಿಸಿದ ಕ್ರೀಡಾಪಟುಗಳು ನಂತರ ಕ್ರೀಡಾಂಗಣದ ಮಧ್ಯದಲ್ಲಿ ಟ್ರೋಫಿ ಇರಿಸಿ ಮ್ಯಾಸ್ಕಟ್‌ಗಳ ಕೈ ಹಿಡಿದು ಸುತ್ತು ಹಾಕಿದರು.

ಕೂಟದಲ್ಲಿ 20 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕಗಳೊಂದಿಗೆ ಜೈನ್‌ ವಿವಿ ಒಟ್ಟು 32 ಪದಕ ಗಳಿಸಿತು. ತೀವ್ರ ಪೈಪೋಟಿ ನೀಡಿದ ಲವ್ಲಿ ವಿವಿ (51) ಪದಕ ಗಳಿಕೆಯಲ್ಲಿ ಅರ್ಧಶತಕ ಮೀರಿದ ಏಕೈಕ ವಿವಿ. ಆದರೆ ಚಿನ್ನ ಗಳಿಕೆಯಲ್ಲಿ ಜೈನ್‌ಗಿಂತ ಹಿಂದೆ ಉಳಿಯಿತು. ಕಳೆದ ಬಾರಿಯ ಚಾಂಪಿಯನ್ ಪಂಜಾಬ್‌ ವಿವಿ 48 ಪದಕಗಳನ್ನು ಗಳಿಸಿದೆ. ಅದು ಗಳಿಸಿದ ಚಿನ್ನ 15 ಮಾತ್ರ.

ADVERTISEMENT

ಕ್ರೀಡಾಕೂಟದಲ್ಲಿ ಎರಡು ರಾಷ್ಟ್ರೀಯ ದಾಖಲೆ ಮತ್ತು 97 ಕೂಟದಾಖಲೆಗಳು ಮುರಿದು ಬಿದ್ದವು. 42 ದಾಖಲೆಗಳು ವೇಟ್‌ಲಿಫ್ಟಿಂಗ್‌ನಲ್ಲಿ ಮೂಡಿದ್ದು ಈಜಿನಲ್ಲಿ 28 ಮತ್ತು ಅಥ್ಲೆಟಿಕ್ಸ್‌ನಲ್ಲಿ 23 ದಾಖಲೆಗಳು ನಿರ್ಮಾಣವಾದವು. ಜೈನ್‌ ವಿವಿಯ ಶಿವ ಶ್ರೀಧರ್‌ 7 ಚಿನ್ನ ಮತ್ತು 2 ಬೆಳ್ಳಿ ಗೆದ್ದುಕೊಂಡರು. ಖೇಲೊ ಇಂಡಿಯಾ ವಿವಿ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕ ಗೆದ್ದ ಸಾಧನೆ ಅವರದಾಗಿದೆ. ಒಂದು ರಾಷ್ಟ್ರೀಯ ದಾಖಲೆ ಅವರ ಹೆಸರಿಗೆ ಸೇರಿದೆ. ಅದೇ ಕಾಲೇಜಿನ ಶೃಂಗಿ ಬಾಂದೇಕರ್‌ 4 ಚಿನ್ನ ಮತ್ತು 1 ಬೆಳ್ಳಿ ಪದಕದೊಂದಿಗೆ ಮಹಿಳೆಯರ ವಿಭಾಗದಲ್ಲಿ ಅತಿ ಹೆಚ್ಚು ಪದಕ ಗೆದ್ದ ಕ್ರೀಡಾಪಟು ಎನಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗದ ವಿವಿಧ ಆಸನಗಳು ರೋಮಾಂಚನಗೊಳಿಸಿದವು. ನಂತರ ಮೈಸುರಿನ ಖುಷಿ ಅವರ ಏಕವ್ಯಕ್ತಿ ಯೋಗದ ವೈವಿಧ್ಯಮಯ ಭಂಗಿಗಳಿಗೆ ಪ್ರೇಕ್ಷಕರ ಮೈಜುಮ್ಮೆಂದಿತು. ಇದರ ಬೆನ್ನಲ್ಲೇ ‘ಆಜಾದಿ ಕಾ ಅಮೃತ್ ಮಹೋತ್ಸವ್‌’ ಅಂಗವಾಗಿ ನಡೆದ ವೈವಿಧ್ಯಮಯ ಕಲಾಕಾರ್ಯಕ್ರಮಗಳು ಮೇಳೈಸಿದವು.

ಪ್ರೊ ಕಬಡ್ಡಿಯಲ್ಲಿ ಅವಕಾಶಕ್ಕೆ ಮನವಿ
ಕ್ರೀಡಾಕೂಟದ ಕಬಡ್ಡಿಯ ಫೈನಲ್‌ನಲ್ಲಿ ಆಡಿದ ಆಟಗಾರರಲ್ಲಿ ಉತ್ತಮ ಸಾಮರ್ಥ್ಯ ತೋರಿದವರಿಗೆ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಲು ಅವಕಾಶ ನೀಡುವಂತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೋರಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ ಜೈನ್‌ ವಿವಿಯಲ್ಲಿ ಎರಡು ಸಾವಿರ ಕ್ರೀಡಾಪಟುಗಳಿಗೆ ವಸತಿಸಹಿತ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುವುದು, 300 ಕೋಚ್‌ಗಳಿಗೂ ಅಲ್ಲಿ ಅವಕಾಶ ಸಿಗಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಉನ್ನತ ಶಿಕ್ಷಣ ಸಚಿವ ಸಿ.ಎನ್‌.ಅಶ್ವತ್ಥನಾರಾಯಣ್, ಕಿಚ್ಚ ಸುದೀಪ್ ಮತ್ತಿತರರು ಇದ್ದರು.

ಕಪ್ಪು ಮಾಸ್ಕ್‌: ಗೊಂದಲ, ವಾಗ್ವಾದ
ಕಪ್ಪು ಮಾಸ್ಕ್ ಮತ್ತು ಕಪ್ಪು ಬಟ್ಟೆ ಧರಿಸಿಕೊಂಡು ಬಂದವರನ್ನು ಪೊಲೀಸರು ವಾಪಸ್ ಕಳುಹಿಸಿದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಗುರುತಿನ ಚೀಟಿ ಹೊಂದಿರುವ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಸಚಿವರು ಘೋಷಿಸಿದ್ದರು. ರಜಾ ದಿನ ಆಗಿದ್ದರಿಂದ ನೂರಾರು ಮಂದಿ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದರು. ಕಪ್ಪು ಬಟ್ಟೆ ಮತ್ತು ಮಾಸ್ಕ್‌ ಧರಿಸಿದ್ದವರನ್ನು ವಾಪಸ್ ಕಳುಹಿಸಲಾಯಿತು. ಆಯೋಜಕರ ತಂಡದಲ್ಲಿ ಕೆಲಸ ಮಾಡಿವ ವ್ಯಕ್ತಿಯೊಬ್ಬರನ್ನು ಕೂಡ ವಾಪಸ್ ಕಳುಹಿಸಲಾಯಿತು. ಅವರು ವಾಹನದ ಬಳಿಗೆ ಹೋಗಿ ಶರ್ಟ್ ಬದಲಾಯಿಸಿ ಖೇಲೊ ಇಂಡಿಯಾದ ಜೆರ್ಸಿ ತೊಟ್ಟುಕೊಂಡು ಬಂದರು.

ಪತ್ರಕರ್ತರಿಗೆ ಪೊಲೀಸ್ ಇಲಾಖೆಯಿಂದ ವಿಶೇಷ ಪಾಸ್ ನೀಡಿದ್ದರೂ ನಿಗದಿಪಡಿಸಿದ ಗೇಟ್‌ನಿಂದ ಪ್ರವೇಶಕ್ಕೆ ಪೊಲೀಸರು ನಿರಾಕರಿಸಿದರು. ಪಾಸ್‌, ಗುರಿತಿನ ಚೀಟಿ ಇತ್ಯಾದಿಗಳನ್ನು ತೋರಿಸಿದರೂ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಬರುವಂತೆ ಕೆಲವರಿಗೆ ತಿಳಿಸಲಾಯಿತು. ಕೊನೆಗೆ ಆಯೋಜಕರೇ ಬಂದು ಒಳಗೆ ಕರೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.