ADVERTISEMENT

ಜಮೈಕಾದ ಸ್ಪ್ರಿಂಟರ್‌ಗೆ ಚಿನ್ನ ಗೆಲ್ಲಲು ಸಹಾಯ ಮಾಡಿ ಹೃದಯ ಗೆದ್ದ ಸ್ವಯಂಸೇವಕಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2021, 7:57 IST
Last Updated 14 ಆಗಸ್ಟ್ 2021, 7:57 IST
   

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಅಂತ್ಯಗೊಂಡು ಕೆಲವು ದಿನಗಳೇ ಕಳೆದರೂ ಅಲ್ಲಿನ ಸ್ಪೂರ್ತಿದಾಯಕ ಕಥೆಗಳು ಒಂದೊಂದಾಗಿ ಹೊರಬರುತ್ತಿವೆ.

ಅದರಲ್ಲಿ ಒಂದನ್ನು ಚಿನ್ನದ ಪದಕ ವಿಜೇತ ಜಮೈಕಾದ ಓಟಗಾರ ಹ್ಯಾನ್ಸ್ಲೆ ಪಾರ್ಚ್‌ಮೆಂಟ್ ಬಹಿರಂಗಪಡಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಭಾಗವಹಿಸಲು ಬಸ್ ಏರಿದ್ದ ಪಾರ್ಚ್‌ಮೆಂಟ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅಂಗಣದ ಬದಲು ಈಜುಕೊಳವನ್ನು ತಲುಪಿದ್ದರು.

ಆಗ ಏನು ಮಾಡಬೇಕೆಂದು ದಿಕ್ಕು ತೋಚದೆ ತಬ್ಬಿಬ್ಬಾದರು. ಈ ಸಂದರ್ಭದಲ್ಲಿ ಒಲಿಂಪಿಕ್ಸ್‌ನ ಕರ್ತವ್ಯ ನಿರತೆ ಸ್ವಯಂಸೇವಕಿ ಮಾಡಿರುವ ಸಹಾಯವನ್ನು ಸ್ಮರಿಸಿದ್ದಾರೆ.

ಈ ಘಟನೆಯನ್ನು ಪಾರ್ಚ್‌ಮೆಂಟ್ ವಿವರಿಸಿದ್ದಾರೆ. ಸಂಗೀತ ಆಲಿಸುತ್ತಾ ಬಸ್ ಏರಿದ್ದ ನಾನು ಬೇರೆಯೇ ಅಂಗಣವನ್ನು ತಲುಪಿದ್ದೆ. ಈ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಮತ್ತೆ ಬಸ್ ಏರಿದರೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಅಲ್ಲಿದ್ದ ಸ್ವಯಂಸೇವಕಿ ಟ್ರಿಜಾನಾ ಸ್ಟಾಕೋವಿಚ್ ತಮ್ಮನ್ನು ಟ್ಯಾಕ್ಸಿ ಹತ್ತಿಸಿದ್ದರಲ್ಲದೆ ಹಣವನ್ನು ನೀಡಿ ಸಹಾಯ ಮಾಡಿದ್ದಾರೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಸ್ಟೇಡಿಯಂ ತಲುಪಲು ಸಾಧ್ಯವಾಯಿತು.

ಬಳಿಕ ನಡೆದಿದ್ದು ಇತಿಹಾಸವೇ ಸರಿ. 31 ವರ್ಷದ ಜಮೈಕಾದ ಸ್ಪ್ರಿಂಟರ್ ಪುರುಷರ 110 ಮೀಟರ್ ಹರ್ಡಲ್ಸ್‌‌ನಲ್ಲಿ ಚಿನ್ನದ ಪದಕ ಗೆದ್ದರು. ಆದರೆ ತಾವು ಬಂದ ಹಾದಿಯನ್ನು ಮರೆಯದ ಪಾರ್ಚ್‌ಮೆಂಟ್, ತಮ್ಮ ಯಶಸ್ಸಿಗೆ ಕಾರಣರಾದ ಸ್ವಯಂಸೇವಕಿಯನ್ನು ಭೇಟಿಯಾಗಿ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಈ ಎಲ್ಲ ಘಟನೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ವಿವರಿಸಿರುವ ಪಾರ್ಚ್‌ಮೆಂಟ್, ಸ್ವಯಂಸೇವಕಿ ಜೊತೆಗಿನ ವಿಡಿಯೊವನ್ನು ಹಂಚಿದ್ದಾರೆ. ಅಲ್ಲದೆಚಿನ್ನದ ಪದಕವನ್ನು ಸ್ಪರ್ಶಿಸುವ ಅದೃಷ್ಟವು ಆಕೆಗೆ ಒಲಿದಿದೆ.

ಈ ವೇಳೆ ತಾವು ಪಡೆದ ಹಣವನ್ನು ಹಿಂತಿರುಗಿಸಿದ್ದರಲ್ಲದೆ ಜಮೈಕಾದ ಟೀಶರ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಮೈಕಾದ ಟೀಶರ್ಟ್ ಧರಿಸಿರುವ ಚಿತ್ರವನ್ನು ಟ್ರಿಜಾನಾ ಕೂಡಾ ಹಂಚಿದ್ದಾರೆ.

ಕ್ರೀಡಾಸ್ಫೂರ್ತಿ ಮೆರೆದ ಈ ಘಟನೆಯು ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ. ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಿನ್ನದ ಪದಕ ಗೆದ್ದಿರುವ ಜಮೈಕಾದ ಸ್ಪ್ರಿಂಟರ್ ಉಸೈನ್ ಬೋಲ್ಟ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.