ನವದೆಹಲಿ: ಒಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಬಂದಿಳಿದ ತಮಗೆ ದೆಹಲಿಯ ಕ್ಯಾಬ್ ಚಾಲಕರಿಂದ ಕಿರುಕುಳವಾಗಿದೆ. ಕಟಕ್‌ನಲ್ಲಿ ತಮಗಾಗಿ ಕಾದಿರಿಸಿದ್ದ ಹೋಟೆಲ್ ಕೋಣೆ ಪ್ರವೇಶಿಸಲು ನಾಲ್ಕು ತಾಸು ಕಾಯಬೇಕಾಯಿತು ಎಂದು ಜಪಾನ್ ಆಟಗಾರ್ತಿ ನೊಜೊಮಿ ಒಕುಹರಾ ದೂರಿದ್ದಾರೆ.
ಒಲಿಂಪಿಕ್ ಪದಕ ಗೆದ್ದಿರುವ ಮತ್ತು ಮಾಜಿ ವಿಶ್ವ ಚಾಂಪಿಯನ್ ಒಕುಹರಾ ಅವರು ಸೋಮವಾರ ಭಾರತಕ್ಕೆ ಬಂದಿಳಿದಾಗ ಆದ ಕೆಟ್ಟ ಅನುಭವವನ್ನು ಫ್ಯಾನ್ಸ್‌ನೆಟ್ ಡಾಟ್ ಜೆಪಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
‘ದೆಹಲಿಗೆ ಬಂದಿಳಿದಾಗ ವಿಮಾನ ನಿಲ್ದಾಣದಲ್ಲಿರುವ ಕ್ಯಾಬ್ ಚಾಲಕರು ದುರ್ನಡತೆ ತೋರಿದರು. ಅಲ್ಲಿಂದ ಕಟಕ್‌ಗೆ ಬಂದಾಗ ಆಯೋಜಕರ ಕಡೆಯಿಂದ ಯಾವುದೇ ಅಧಿಕೃತ ಸಾರಿಗೆ ವ್ಯವಸ್ಥೆ ಇರಲಿಲ್ಲ. ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಬಂದಿಳಿದಾಗಲೂ ಕೆಟ್ಟ ಅನುಭವ ಕಾದಿತ್ತು. ನನ್ನ ಹೆಸರಿನಲ್ಲಿದ್ದ ಕೋಣೆಯ ಬೀಗ ಪಡೆಯಲು ನಾಲ್ಕು ಗಂಟೆ ಕಾಯಬೇಕಾಯಿತು. ಅಲ್ಲಿಂದ 8 ಗಂಟೆಗೆ ನಿಗದಿಯಾಗಿದ್ದ ಅಭ್ಯಾಸಕ್ಕಾಗಿ ತೆರಳಲು ಶಟಲ್ ಬಸ್ ಅಥವಾ ಕಾರಿನ ಸೌಲಭ್ಯವನ್ನೂ ನೀಡಲಿಲ್ಲ’ ಎಂದು 28 ವರ್ಷದ ಒಕುಹರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ, ‘ಇದು ವಿಷಾದಕರ ಸಂಗತಿ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.
ಅಲ್ಲದೇ ಇದರೊಂದಿಗೆ ಸ್ಥಳೀಯ ಆಯೋಜಕ ಸಂಸ್ಥೆಯನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯನ್ನೂ ಅವರು ನೀಡಿದ್ದಾರೆ.
‘ಜಪಾನ್ ಆಟಗಾರ್ತಿಯು ಅನುಭವಿಸಿರುವ ತೊಂದರೆ ನನಗರ್ಥವಾಗುತ್ತದೆ. ಆದರೆ ಅವರಿಂದ ತಮಗೆ ಬೇಕಾಗುವ ವಸತಿ, ಸಾರಿಗೆ ಸೌಲಭ್ಯಗಳ ಕುರಿತು ಯಾವುದೇ ರೀತಿಯ ಇಮೇಲ್ ಬಂದಿರಲಿಲ್ಲ. ಇದೊಂದು ತಾಂತ್ರಿಕ ಸಂಗತಿಯಾಗಿದೆ. ಸಂವಹನದ ಕೊರತೆ ಇಲ್ಲಿದೆ. ಅವರಿಂದ ನಮಗೆ ಯಾವುದೇ ಮಾಹಿತಿ ಬಂದಿರಲಿಲ್ಲ’ ಎಂದೂ ಮಿಶ್ರಾ ಹೇಳಿದ್ದಾರೆ.
‘ಅದೇನೆ ಇರಲಿ. ಒಕುಹರಾ ಅವರು ಬಹಳ ಖ್ಯಾತನಾಮ ಆಟಗಾರ್ತಿಯಾಗಿದ್ದಾರೆ. ನಮ್ಮ ಅತಿಥಿಯಾಗಿದ್ದಾರೆ. ಅವರಿಗೆ ತೊಂದರೆಯಾಗಿರುವ ಕುರಿತು ತಿಳಿದಾಕ್ಷಣ ಆಯೋಜಕರಿಗೆ ಕರೆ ಮಾಡಿ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಂಡಿರುವೆ. ಭವಿಷ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಮಿಶ್ರಾ ಭರವಸೆ ನೀಡಿದ್ದಾರೆ.
ಒಕುಹರಾ ಅವರು ಈಚೆಗೆ ಲಖನೌನಲ್ಲಿ ನಡೆದ ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ನಂತರ ನಡೆದಿದ್ದ ಗುವಾಹಟಿ ಓಪನ್ ಟೂರ್ನಿಯಲ್ಲಿ ಅವರು ಆಡಿರಲಿಲ್ಲ. ಕಳೆದ ಭಾನುವಾರ ರಾತ್ರಿ ಅವರು ಹಾಂಗ್‌ಕಾಂಗ್ ಮೂಲಕ ದೆಹಲಿಗೆ ಬಂದಿದ್ದರು. ದೇಶದ ರಾಜಧಾನಿಯಲ್ಲಿ ಅವರಿಗೆ ಕೆಲವು ಕಹಿ ಅನುಭವಗಳಾದವು.
ವಿಮಾನ ನಿಲ್ದಾಣದಲ್ಲಿ ಅಪರಿಚಿತನೊಬ್ಬ ಅವರ ಸರಂಜಾಮುಗಳನ್ನು ಟ್ರಾಲಿಯಲ್ಲಿ ಇಟ್ಟು ಟ್ಯಾಕ್ಸಿಯತ್ತ ಕರೆದೊಯ್ದ. ಆ ಟ್ಯಾಕ್ಸಿಯಲ್ಲಿ ತಾವು ರಾತ್ರಿ ಉಳಿದುಕೊಳ್ಳಬೇಕಿದ್ದ ಹೋಟೆಲ್ ತಲುಪಿದ ಒಕುಹರಾ, ಚಾಲಕನಿಗೆ ನಿಗದಿತ ದರಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ನೀಡಬೇಕಾಯಿತು.
‘ಸ್ಪರ್ಧಾಳುಗಳು ಬಿಎಐ ನಿಗದಿಪಡಿಸಿರುವ ನಮೂನೆಯಲ್ಲಿ ಹೋಟೆಲ್ ಕೋಣೆಗಾಗಿ ಮನವಿಯನ್ನು ಮುಂಗಡವಾಗಿ ಸಲ್ಲಿಸಬೇಕು. ಆದರೆ ಒಕುಹರಾ ಅವರಿಂದ ಯಾವುದೇ ಮನವಿಪತ್ರ ಬಂದಿರಲಿಲ್ಲ. ಆದ್ದರಿಂದ ಅವರ ಹೆಸರಿನಲ್ಲಿ ಕೋಣೆ ಕಾದಿರಿಸಲಾಗಿರಲಿಲ್ಲ. ನಾನು ಅವರನ್ನು ಹೋಟೆಲ್ ಲಾಬಿಯಲ್ಲಿ ಕುಳಿತಿರುವುದನ್ನು ಗಮನಿಸಿದೆ. ನಾನು ಮತ್ತು ಜಂಟಿ ಕಾರ್ಯದರ್ಶಿ ಪ್ರಭಾಕರ್ ರಾವ್ ಅವರು ಸೇರಿ ಒಕುಹರಾ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಮುಂದಾದೆವು’ ಎಂದು ಸಂಘಟನಾ ಕಾರ್ಯದರ್ಶಿ ನಳೀನ್ ಕುಮಾರ್ ತಿಳಿಸಿದ್ದಾರೆ.
ಈ ಟೂರ್ನಿಯಲ್ಲಿ ಭಾಗವಹಿಸಲು ಬಂದಿರುವ 30 ದೇಶಗಳ ಯಾವುದೇ ಸ್ಪರ್ಧಿಗೂ ಇಂತಹ ಸಮಸ್ಯೆಗಳಾಗಿಲ್ಲ ಎಂದೂ ಕುಮಾರ್ ಸ್ಪಷ್ಟಪಡಿಸಿದರು.
ಆದರೆ ಇಂತಹ ಸಮಸ್ಯೆಗಳು ಇದೇ ಮೊದಲೇನಲ್ಲ. ಈಚೆಗೆ ಗುವಾಹಟಿಯಲ್ಲಿ ನಡೆದ ಟೂರ್ನಿಯ ಸಂದರ್ಭದಲ್ಲಿ ಕಲುಷಿತವಾದ ನೀರು ಕೊಟ್ಟಿದ್ದನ್ನು ಮಲೇಷ್ಯಾದ ಆಟಗಾರ ಸೂಂಗ್ ಜೂ ವೆನ್ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದರು. ಲಖನೌನಲ್ಲಿ ನಡೆದ ಟೂರ್ನಿಯ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಮೇಲೆ ಪಾರಿವಾಳಗಳ ಹಿಕ್ಕೆಗಳು ಬಿದ್ದಿದ್ದನ್ನು ವಿಡಿಯೊ ಮಾಡಿದ್ದ ಸಿಂಗಪುರ ಸ್ಪರ್ಧಿ ಜೆಸಿಕಾ ಟಾನ್ ದೂರಿದ್ದರು.
ಸಿಂಧು ಪ್ರಣಯ್ ಸಹಾಯ
ಪ್ರಯಾಣ ಮತ್ತು ವಸತಿ ಸೌಲಭ್ಯ ಪಡೆಯುವಲ್ಲಿ ತೊಂದರೆ ಅನುಭವಿಸಿದ ನಜೋಮಿ ಒಕುಹರಾ ಅವರಿಗೆ ಭಾರತದ ಆಟಗಾರರಾದ ಎಚ್.ಎಸ್. ಪ್ರಣಯ್ ಮತ್ತು ಪಿ.ವಿ. ಸಿಂಧು ಸಹಾಯ ನೀಡಿದರು. ಅವರಿಬ್ಬರೂ ಆಯೋಜಕರೊಂದಿಗೆ ಚರ್ಚಿಸಿ ತಮ್ಮ ಸ್ನೇಹಿತೆ ಒಕುಹರಾ ಅವರಿಗೆ ಹೋಟೆಲ್ ಕೋಣೆ ಲಭಿಸುವಂತೆ ನೋಡಿಕೊಂಡರು. ಒಕುಹರಾ ಅವರು ಅಭ್ಯಾಸಕ್ಕೆ ತೆರಳಲು ಪ್ರಣಯ್ ಅವರೇ ಕಾರು ಬುಕ್ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.