ಬ್ರಸೆಲ್ಸ್: ಭಾರತದ ಜಾವೆಲಿನ್ ಥ್ರೊ ಮಹಿಳಾ ಸ್ಪರ್ಧಿ ಅನ್ನು ರಾಣಿ ಅವರ ನಿರಾಶಾದಾಯಕ ಫಾರ್ಮ್ ಮುಂದುವರಿಯಿತು. ಇಲ್ಲಿ ಶುಕ್ರವಾರ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಅವರು 57.74 ಮೀ. ಎಸೆತದೊಡನೆ ಏಳನೇ ಸ್ಥಾನ ಪಡೆದರು.
ಮೂರನೇ ಯತ್ನದಲ್ಲಿ 31 ವರ್ಷದ ಅನ್ನು ಈ ಥ್ರೊ ದಾಖಲಿಸಿ, ಕಣದಲ್ಲಿದ್ದ ಎಂಟು ಮಂದಿಯ ಪೈಕಿ ಏಳನೇ ಸ್ಥಾನ ಪಡೆದರು. ಅವರು ಈ ಋತುವಿನಲ್ಲಿ 60 ಮೀ. ದೂರ ಸಾಧಿಸಿಲ್ಲ. ರಾಷ್ಟ್ರೀಯ ದಾಖಲೆ ಹೊಂದಿರುವ ಅವರು ಮೇ ತಿಂಗಳಲ್ಲಿ ನಡೆದ ಫೆಡರೇಷನ್ ಕಪ್ ಕೂಟದಲ್ಲಿ 59.24 ಮೀ. ದೂರಕ್ಕೆ ಎಸೆದಿದ್ದೇ ಈ ಋತುವಿನ ಉತ್ತಮ ಸಾಧನೆಯಾಗಿದೆ. ಕಳೆದ ವರ್ಷ ರಾಷ್ಟ್ರೀಯ ದಾಖಲೆ ಸ್ಥಾಪಿಸುವಾಗ ಅವರು ಜಾವೆಲಿನ್‌ಅನ್ನು 63.82 ಮೀ. ದೂರಕ್ಕೆ ಎಸೆದಿದ್ದರು.
ವಿಶ್ವ ಚಾಂಪಿಯನ್ ಹರುಕಾ ಕಿಟಗುಚಿ (ಜಪಾನ್) ಅವರು 67.38 ಮೀ. ಸಾಧನೆಯೊಡನೆ ಚಿನ್ನ, ಆಸ್ಟ್ರಿಯಾ ವಿಕ್ಟೋರಿಯಾ ಹಡ್ಸನ್ (64.65 ಮೀ) ಅವರು ಬೆಳ್ಳಿ ಮತ್ತು ಲಾತ್ವಿಯಾದ ಲಿನಾ ಮುಝೆ ಸಿರ್ಮಾ (63 ಮೀ.) ಕಂಚಿನ ಪದಕ ಪಡೆದರು.
ಅನ್ನು ಈ ಹಿಂದೆ ಒಮ್ಮೆ ಮಾತ್ರ (ಲೂಸಾನ್, 2019) ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಿದ್ದು, ಆ ಬಾರಿ 59.35 ಮೀ. ದೂರ ಎಸೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.