ADVERTISEMENT

ಡೋಪಿಂಗ್ ಸುಳಿಯಲ್ಲಿ ಜಾವೆಲಿನ್‌ ತಾರೆ, ಕನ್ನಡಿಗ ಮನು?

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಗೆ ತಡೆ: ಎಎಫ್‌ಐಗೆ ‘ನಾಡಾ’ ಸೂಚನೆ

ಪಿಟಿಐ
Published 28 ಜೂನ್ 2024, 11:29 IST
Last Updated 28 ಜೂನ್ 2024, 11:29 IST
<div class="paragraphs"><p>ಮನು </p></div>

ಮನು

   

(ಪಿಟಿಐ ಸಂಗ್ರಹ ಚಿತ್ರ)

ಪಂಚಕುಲಾ (ಹರಿಯಾಣ),: ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (ನಾಡಾ) ಸೂಚನೆಯ ಮೇರೆಗೆ ಜಾವೆಲಿನ್‌ ಥ್ರೊ ಸ್ಪರ್ಧಿ, ಕನ್ನಡಿಗ ಡಿ.ಪಿ. ಮನು ಅವರಿಗೆ ಸ್ಪರ್ಧೆಗಳಿಂದ ದೂರ ಉಳಿಯುವಂತೆ ಅಥ್ಲೆಟಿಕ್ಸ್‌ ಫೆಡರೇಷನ್ ಆಫ್‌ ಇಂಡಿಯಾ (ಎಎಫ್‌ಐ) ಹೇಳಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ವಿಶ್ವಾಸದಲ್ಲಿದ್ದ ಅವರು ಉದ್ದೀಪನ ಮದ್ದು ಸೇವನೆ ಬಲೆಯಲ್ಲಿ ಸಿಲುಕಿರುವ ಸಾಧ್ಯತೆಯಿದೆ.

ADVERTISEMENT

ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ 24 ವರ್ಷ ವಯಸ್ಸಿನ ಮನು ಅವರು ವಿಶ್ವ ರ‍್ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ ಈಗ ಅವರಿಗೆ ‘ಪ್ಯಾರಿಸ್‌ ಟಿಕೆಟ್‌’ ಕೈತಪ್ಪುವ ಆತಂಕ ಎದುರಾಗಿದೆ.

ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ–ರಾಜ್ಯ ಚಾಂಪಿಯನ್‌ಷಿಪ್ಸ್‌ನ ಪ್ರಾಥಮಿಕ ಪಟ್ಟಿಯಲ್ಲಿ ಅವರ ಹೆಸರು ಇತ್ತು. ಆದರೆ ಪರಿಷ್ಕೃತ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.

ಸ್ಪರ್ಧಾಕೂಟಗಳಲ್ಲಿ ಭಾಗವಹಿಸದಂತೆ ಮನು ಅವರನ್ನು ತಡೆಯುವಂತೆ ‘ನಾಡಾ’, ಫೆಡರೇಷನ್‌ಗೆ ಸೂಚನೆ ನೀಡಿದೆ ಎಂದು ಎಎಫ್‌ಐ ಅಧ್ಯಕ್ಷ ಅದಿಲ್‌ ಸುಮರಿವಾಲಾ ಪಿಟಿಐಗೆ ತಿಳಿಸಿದರು. ಆದರೆ ಅವರು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ದೋಷಿಯಾಗಿದ್ದಾರೆಯೇ ಎಂಬುದನ್ನು ಅವರು ಖಚಿತಪಡಿಸಲಿಸಿಲ್ಲ.

‘ಆ ರೀತಿಯದ್ದೇನಾದರೂ (ಡೋಪಿಂಗ್‌ ಪ್ರಕರಣ) ಇರಬಹುದು. ಆದರೆ ವಾಸ್ತವ ಏನೆಂದು ನಮಗೆ ತಿಳಿದಿಲ್ಲ. ಮನು ಅವರಿಗೆ ಸ್ಪರ್ಧೆಗಳಲ್ಲಿ ಅವಕಾಶ ನೀಡಬಾರದು ಎಂದು ಎಎಫ್‌ಐ ಕಚೇರಿಗೆ ಗುರುವಾರ ‘ನಾಡಾ’ದಿಂದ ಕರೆ ಬಂದಿತ್ತು’ ಎಂದು ಸುಮರಿವಾಲಾ ವಿವರಿಸಿದರು.

‘ಅದು ಬಿಟ್ಟರೆ ಬೇರೇನೂ (ಬೇರೆ ರೀತಿಯ ಉಲ್ಲಂಘನೆ) ಮಾಹಿತಿಯಿಲ್ಲ. ಸ್ವತಃ ಅವರೇ (ಮನು) ನಾಡಾದಿಂದ ವಿಷಯ ತಿಳಿದುಕೊಳ್ಳುವ  ಯತ್ನದಲ್ಲಿದ್ದಾರೆ’ ಎಂದರು.

ಕಳೆದ ತಿಂಗಳ 15 ರಿಂದ 19ರವರೆಗೆ ಭುವನೇಶ್ವರದಲ್ಲಿ ನಡೆದ ಫೆಡರೇಷನ್‌ ಕಪ್‌ ಕೂಟದಲ್ಲಿ ಮನು ಎರಡನೇ ಸ್ಥಾನ (ಮೊದಲ ಸ್ಥಾನ ನೀರಜ್ ಚೋಪ್ರಾ) ಪಡೆದಿದ್ದರು. ನಂತರ ತೈಪಿ ನಗರದಲ್ಲಿ ನಡೆದ ತೈವಾನ್‌ ಅಥ್ಲೆಟಿಕ್ಸ್ ಓಪನ್‌ ಕೂಟದಲ್ಲಿ ಅವರು ಜಾವೆಲಿನ್‌ಅನ್ನು 81.58 ಮೀ. ದೂರ ಎಸೆದು ಸ್ವರ್ಣ ಪದಕ ವಿಜೇತರಾಗಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅವರು ಹಾಲಿ 15ನೇ ಸ್ಥಾನದಲ್ಲಿದ್ದಾರೆ. ಪ್ಯಾರಿಸ್‌ ಕೂಟಕ್ಕೆ ಆಯ್ಕೆಯಾಗುವ 32 ಅಥ್ಲೀಟುಗಳಲ್ಲಿ ಅವರೂ ಆಯ್ಕೆಯಾಗುವ ಹಾದಿಯಲ್ಲಿದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅಥ್ಲೀಟುಗಳಿಗೆ ಜೂನ್‌ 30ರ ಗಡುವು ನಿಗದಿಯಾಗಿದೆ.

ಒಲಿಂಪಿಕ್ಸ್‌ಗೆ ಅರ್ಹತಾ ಮಟ್ಟವಾದ 85.50 ಮೀ. ದೂರವನ್ನು ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಈಗಾಗಲೇ ದಾಖಲಿಸಿದ್ದಾರೆ. ಒಂದು ದೇಶವು ಒಂದು ಸ್ಪರ್ಧೆಗೆ ಗರಿಷ್ಠ ಮೂವರನ್ನು ಮಾತ್ರ ಕಳುಹಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.