ಜಕಾರ್ತ: ಭಾರತದ ಸಂದೀಪ್ ಚೌಧರಿ ಅವರು ಇಲ್ಲಿ ನಡೆಯುತ್ತಿರುವ ಮೂರನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದರು. ಈ ಕೂಟದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದು.
ಸೋಮವಾರ ನಡೆದ ಪುರುಷರ ಎಫ್42/61–64 ವಿಭಾಗದಲ್ಲಿ ಸಂದೀಪ್ 60.01 ಮೀಟರ್ಸ್ ದೂರ ಜಾವೆಲಿನ್ ಎಸೆದರು. ಶ್ರೀಲಂಕಾದ ಚಮಿಂಡಾ ಸಂಪತ್ ಹೆತ್ತಿ (59.32 ಮೀ) ಮತ್ತು ಇರಾನ್‌ನ ಒಮಿದಿ ಅಲಿ (58.97 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
2008ರಲ್ಲಿ ಸೊಂಟದ ಮುರಿತಕ್ಕೆ ಒಳಗಾಗಿದ್ದ ಸಂದೀಪ್ ಅವರ ಕಾಲುಗಳ ಶಕ್ತಿ ಕುಂದಿತ್ತು. ದೆಹಲಿಯವರಾದ ಸಂದೀಪ್ ಬಾಲ್ಯದಿಂದಲೂ ಉತ್ತಮ ಕ್ರೀಡಾಪಟುವಾಗಿದ್ದರು. ಫುಟ್‌ಬಾಲ್ ಗೋಲ್‌ಕೀಪಿಂಗ್, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅಂಗವೈಕಲ್ಯ ಕಾಡಿದ ನಂತರವೂ ದೃತಿಗೆಡದೇ ಜಾವೆಲಿನ್ ಥ್ರೋನಲ್ಲಿ ಸಾಧನೆ ಮಾಡಿದರು. 2017 ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿಯೂ ಅವರು ಗಮನ ಸೆಳೆದಿದ್ದರು.
ಪುರುಷರ ಪವರ್‌ಲಿಫ್ಟಿಂಗ್‌ನ 49 ಕೆ.ಜಿ. ವಿಭಾಗದಲ್ಲಿ ಭಾರತದ ಫರ್ಮಾನ್ ಬಾಶಾ ಮತ್ತು ಪರಮಜೀತ್ ಕುಮಾರ್ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.
ಈಜಿನಲ್ಲಿಯೂ ಭಾರತಕ್ಕೆ ಪದಕ ಒಲಿಯಿತು. ಮಹಿಳೆಯರ 100 ಮೀಟರ್ಸ್ ಬಟರ್‌ಫ್ಲೈನಲ್ಲಿ ಭಾರತದ ದೇವಾಂಶಿ ಸತಿಜಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪುರುಷರ 200 ಮೀಟರ್ಸ್‌ನ ಎಸ್.ಎಂ. 7 ವಿಭಾಗದಲ್ಲಿ ಸುಯಶ್ ಜಾಧವ್ ಕಂಚು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.