ನವದೆಹಲಿ: ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಪಟುಗಳಾದ ಕರ್ನಾಟಕದ ಡಿ.ಪಿ. ಮನು ಮತ್ತು ಒಡಿಶಾದ ಕಿಶೋರ್ ಜೇನಾ ಅವರು ಅಥ್ಲೆಟಿಕ್ಸ್ ಇಂಟೆಗ್ರಿಟಿ ಯುನಿಟ್ (ಎಐಯು)ನ ನೋಂದಾಯಿತ ಪರೀಕ್ಷಾ ಪೂಲ್‌ಗೆ (ಆರ್‌ಟಿಪಿ) ಸೇರ್ಪಡೆಗೊಂಡಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಆರ್‌ಟಿಪಿಯಲ್ಲಿ ಸೇರಿಕೊಂಡಿದ್ದರು. ಅವರೊಂದಿಗೆ ಈಗ 2024ರ ಮೊದಲ ತ್ರೈಮಾಸಿಕಕ್ಕೆ ಎಐಯು ಪ್ರಕಟಿಸಿದ ಪಟ್ಟಿಯಲ್ಲಿ ಜೇನಾ ಮತ್ತು ಮನು ಸೇರ್ಪಡೆಯಾಗಿದ್ದಾರೆ.
ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಜೇನಾ ಅವರು ಬುಡಾಪೆಸ್ಟ್‌ನಲ್ಲಿ ನಡೆದ 2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದರೆ, ಮನು ಆರನೇ ಸ್ಥಾನ ಪಡೆದಿದ್ದರು. ಅಲ್ಲಿ ಚೋಪ್ರಾ ಚಿನ್ನ ಗೆದಿದ್ದರು. ಈ ಕೂಟದ ಜಾವೆಲಿನ್ ಥ್ರೋ ಫೈನಲ್‌ನ ಅಗ್ರ ಆರರಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದು ದಾಖಲೆಯಾಗಿತ್ತು.
ಒಟ್ಟಾರೆಯಾಗಿ ಭಾರತದ ಏಳು ಕ್ರೀಡಾಪಟುಗಳು ಆರ್‌ಟಿಪಿಯಲ್ಲಿ ಸೇರಿಕೊಂಡಂತಾಗಿದೆ. 3000 ಮೀ ಸ್ಟೀಪಲ್‌ಚೇಸರ್ ಅವಿನಾಶ್ ಸಾಬ್ಳೆ, ಮಹಿಳಾ ಜಾವೆಲಿನ್ ಥ್ರೋಪಟು ಅನ್ನು ರಾಣಿ ಮತ್ತು ಲಾಂಗ್ ಜಂಪ್ ಸ್ಪರ್ಧಿಗಳಾದ ಮುರಳಿ ಶ್ರೀಶಂಕರ್ ಮತ್ತು ಜಸ್ವಿನ್ ಆಲ್ಡ್ರಿನ್ ಈ ಪಟ್ಟಿಯಲ್ಲಿರುವ ಇತರ ಭಾರತೀಯರು.
ಟಿಆರ್‌ಪಿಯಲ್ಲಿ ಸೇರಿಕೊಂಡ ಕ್ರೀಡಾಪಟುಗಳು ಪ್ರತಿ ತ್ರೈಮಾಸಿಕ ಅವಧಿಯಲ್ಲಿ ತಮ್ಮ ಮನೆಯ ವಿಳಾಸ, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ, ತರಬೇತಿ ಸ್ಥಳ, ಸ್ಪರ್ಧೆಯ ವೇಳಾಪಟ್ಟಿಗಳು ಮತ್ತು ಸ್ಥಳಗಳ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
ಕ್ರೀಡಾಪಟುಗಳು ಪ್ರತಿ ದಿನವೂ 60 ನಿಮಿಷಗಳ ಸಮಯದ ಸ್ಲಾಟ್ ಅನ್ನು ಒದಗಿಸಬೇಕಾಗುತ್ತದೆ. ಅವರು ಸಲ್ಲಿಸಿದ ಮಾಹಿತಿಯಂತೆ ಸ್ಟಾಟ್‌ನಲ್ಲಿ ಇರಲು ವಿಫಲವಾದರೆ ‘ಮಿಸ್ಸಿಂಗ್ ಟೆಸ್ಟ್’ ಎಂದು ನಮೂದು ಮಾಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ತಪ್ಪಿಸಿಕೊಂಡಲ್ಲಿ, ಉದ್ದೀಪನ ಮದ್ದು ತಡೆ ನಿಯಮ ಉಲ್ಲಂಘನೆಯಾಗುತ್ತದೆ ಮತ್ತು ಅಂಥವರನ್ನು ಎರಡು ವರ್ಷಗಳ ಅಮಾನತುಗೊಳಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.