ADVERTISEMENT

‘ಜಯದೇವ ಜಂಗಿ ಕುಸ್ತಿ’: ಆನಂದ್, ಸಿದ್ದಪ್ಪಗೆ ‘ಚಿನ್ಮೂಲಾದ್ರಿ ಕೇಸರಿ’ ಪ್ರಶಸ್ತಿ

ಗಮನಸೆಳೆದ ಪುಟಾಣಿ ಪೈಲ್ವಾನರು * ಕುಸ್ತಿಪ್ರಿಯರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 14:15 IST
Last Updated 20 ಅಕ್ಟೋಬರ್ 2018, 14:15 IST
ಚಿತ್ರದುರ್ಗದಲ್ಲಿ ಶನಿವಾರ ನಡೆದ ‘ಜಯದೇವ ಜಂಗಿ’ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿ ಪಟುಗಳು ಸೆಣಸಾಡುತ್ತಿರುವ ಆಕರ್ಷಕ ನೋಟ. 
ಚಿತ್ರದುರ್ಗದಲ್ಲಿ ಶನಿವಾರ ನಡೆದ ‘ಜಯದೇವ ಜಂಗಿ’ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿ ಪಟುಗಳು ಸೆಣಸಾಡುತ್ತಿರುವ ಆಕರ್ಷಕ ನೋಟ.    

ಚಿತ್ರದುರ್ಗ: ಪ್ರಾಂಗಣವೊಂದರಲ್ಲಿ ಚಿಣ್ಣರಿಂದ ಯುವಕರವರೆಗೂ ಕೆಲವರು ಲಂಗೋಟಿ ತೊಟ್ಟು ನಿಂತಿದ್ದರು. ಅಲ್ಲಿ ಗರಡಿ ಮನೆಯ ಮಣ್ಣಿನ ಸುವಾಸನೆ ಬೀರುತ್ತಿತ್ತು. ಅಲ್ಲದೆ, ಅನೇಕರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಸುತ್ತಲೂ ಎತ್ತ ನೋಡಿದರೂ ಕಿಕ್ಕಿರಿದ ಜನಸಂದಣಿ...

ಕೋಟೆ ನಗರಿಯ ಮುರುಘಾಮಠದ ಆವರಣದಲ್ಲಿ ಶನಿವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದಿಂದ ಹಮ್ಮಿಕೊಂಡಿದ್ದ ‘ಜಯದೇವ ಜಂಗಿ ಕುಸ್ತಿ’ ಯಾವಾಗ ಆರಂಭವಾಗುತ್ತೆ ಎಂಬುದಾಗಿ ಕುಸ್ತಿಪ್ರಿಯರು ಕಾತುರದಿಂದ ಕಾಯುತ್ತ ಕುಳಿತಿದ್ದ ಕ್ಷಣವದು.

ಕುಸ್ತಿಪಟುಗಳು ತಮಗಾಗಿ ನಿರ್ಮಾಣವಾಗಿದ್ದ ಮಣ್ಣಿನ ಅಂಗಳ ಪ್ರವೇಶಿಸುತ್ತಿದ್ದಂತೆ ಎಲ್ಲಿಲ್ಲದ ಉತ್ಸಾಹ. ಒಬ್ಬರಿಗೊಬ್ಬರು ಕೈಕೈ ಕುಲುಕುತ್ತ, ಪೈಲ್ವಾನರ ಸೂಚನೆಗಾಗಿ ಕಾಯುತ್ತಿದ್ದರು. ಕುಸ್ತಿ ಪ್ರಾರಂಭವಾಗುತ್ತಿದ್ದಂತೆ ಗರಡಿ ಮನೆಯ ಪಟ್ಟುಗಳು ಒಂದೊಂದಾಗಿ ಹೊರಬಂದವು.

ADVERTISEMENT

ಒಂದೆಡೆ ಕುಸ್ತಿಪಟುಗಳು ಏಟಿಗೆ, ಎದಿರೇಟು... ತಂತ್ರಕ್ಕೆ ಪ್ರತಿತಂತ್ರ... ಮಣ್ಣನ್ನು ಪರಸ್ಪರ ದೇಹಕ್ಕೆ ಎರಚಿಕೊಳ್ಳುತ್ತ ಪಟ್ಟುಬಿಡದೆ ಪೈಪೋಟಿ ನಡೆಸುತ್ತಿದ್ದರು. ಸ್ಪರ್ಧೆಯಲ್ಲಿ ಒಬ್ಬರನ್ನು ನೆಲಕ್ಕೆ ಕೆಡವುತ್ತಿದ್ದಂತೆ ಎದುರಾಳಿ ತೋಳು ತಟ್ಟಿಕೊಂಡರೆ, ಅದೇ ರೀತಿ ಮತ್ತೊಬ್ಬರು ಭುಜ ತಟ್ಟಿಕೊಳ್ಳುತ್ತಿದ್ದರು. ಮತ್ತೊಂದೆಡೆ ತೊಡೆ ತಟ್ಟಿದ ಪುಟಾಣಿ ಕುಸ್ತಿಪಟುಗಳು, ಕೈ ಕೈ ಮಿಲಾಯಿಸಿ, ಪಟ್ಟು ಹಾಕಲು ಮುಂದಾದರು. ಅಲ್ಲಿ ನೆರೆದಿದ್ದ ನೂರಾರು ಕುಸ್ತಿಪ್ರೇಮಿಗಳು ರೋಮಾಂಚನಗೊಂಡು ಶಿಳ್ಳೆ, ಕೇಕೆ ಹಾಕುತ್ತಿದ್ದರು.

‘ಚಿನ್ಮೂಲಾದ್ರಿ ಕೇಸರಿ’ ಪ್ರಶಸ್ತಿಗೆದಾವಣಗೆರೆಯ ಆನಂದ್, ವಿಜಯಪುರದ ಸಿದ್ದಪ್ಪ ತೀವ್ರ ಪೈಪೋಟಿ ನಡೆಸಿದರು. ವಿಜೇತರನ್ನು ನಿರ್ಣಯಿಸಲು ನಡೆದ ಈ ಅಂತಿಮ ಪಂದ್ಯ ಸ್ಪರ್ಧಾಳುಗಳನ್ನು ತುದಿಗಾಲ ಮೇಲೆ ನಿಲ್ಲಿಸಿತ್ತಲ್ಲದೆ,ರೋಚಕ ಘಟ್ಟ ತಲುಪಿತು. ಇಬ್ಬರ ನಡುವಣ ನಡೆದ ಕುಸ್ತಿಯಲ್ಲಿ ಆಕರ್ಷಕ ಪಟ್ಟುಗಳು, ತಂತ್ರಗಳು, ಮೈನವರೇಳಿಸುವ ಚಟುವಟಿಕೆಗಳು ನಡೆದವು.

ಹಲವು ಸುತ್ತುಗಳಲ್ಲಿ ನಡೆದ ಈ ಪಂದ್ಯದಲ್ಲಿ ಇಬ್ಬರು ಸಮಬಲದ ಹೋರಾಟ ನಡೆಸಿ ಜಂಟಿಯಾಗಿ ಜಯಶಾಲಿಯಾದರು.ನೋಡುಗರಿಗೂ ಸಾಕಷ್ಟು ರಸದೌತಣ ಉಣಬಡಿಸಿತು.ಪ್ರಶಸ್ತಿಯೂ ತಲಾ ₹ 7.5 ಸಾವಿರ ನಗದು, ಪ್ರಶಸ್ತಿ ಪತ್ರ, ಪದಕ ಒಳಗೊಂಡಿದೆ.

ಶಿವಮೂರ್ತಿ ಮುರುಘಾ ಶರಣರು ಪಂದ್ಯಾವಳಿಗೆ ಚಾಲನೆ ನೀಡಿದರು. ಬಸವ ಹರಳಯ್ಯ ಸ್ವಾಮೀಜಿ, ಬಸವ ಭೃಂಗೇಶ್ವರ ಸ್ವಾಮೀಜಿ, ಮಹಾಂತ ರುದ್ರೇಶ್ವರ ಸ್ವಾಮೀಜಿ, ವಿವಿಧ ಮಠಾಧೀಶರು ನೇತೃತ್ವ ವಹಿಸಿದ್ದರು.

ಬೆಳಗಾವಿ, ಧಾರವಾಡ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಜಮಖಂಡಿ ಹಾಗೂ ಮಹಾರಾಷ್ಟ್ರ ಕೊಲ್ಲಾಪುರ ಸೇರಿ ಸುಮಾರು 120 ಕ್ಕೂ ಅಧಿಕ ಮಂದಿ ಕುಸ್ತಿಪಟುಗಳು ಪಾಲ್ಗೊಂಡಿದ್ದರು.ಮಹೇಂದ್ರನಾಥ್, ಪೈಲ್ವಾನರಾದ ತಿಪ್ಪೇಸ್ವಾಮಿ, ಮರಡಿ, ಅಫೀಜ್, ಮೂರ್ತಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.