ಹೊ ಚಿ ಮಿನ್ ಸಿಟಿ: ಭಾರತದ ಅಜಯ್ ಜಯರಾಮ್ ಹಾಗೂ ಮಿಥುನ್ ಮಂಜುನಾಥ್ ಅವರು ಇಲ್ಲಿ ನಡೆಯುತ್ತಿರುವ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಅಜಯ್, 26–24, 21–17ರಿಂದ ಕೆನಡಾದ ಶೆಂಗ್ ಕ್ಸಿಯೊಡಂಗ್ ಅವರನ್ನು ಮಣಿಸಿದರು.
ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಭಾರತದ ಆಟಗಾರ ಜಪಾನ್‌ನ ಏಳನೇ ಶ್ರೇಯಾಂಕಿತ ಯು ಇಗರಾಶಿ ಅವರನ್ನು ಎದುರಿಸಲಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯವುಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪಂದ್ಯದ ಆರಂಭದಿಂದಲೂ ಪ್ರಾಬಲ್ಯ ಮೆರೆದ ಅಜಯ್, ಮೊದಲನೇ ಗೇಮ್‌ನಲ್ಲಿ 5–0ಯ ಮುನ್ನಡೆ ಗಳಿಸಿದರು. ಆದರೆ, ಕೂಡಲೇ ಎಚ್ಚೆತ್ತಿಕೊಂಡ ಶೆಂಗ್ ಅವರು ತಿರುಗೇಟು ನೀಡಿದರು. ಮುಂದಿನ ಕೆಲಹೊತ್ತು ಸಮಬಲದ ಹೋರಾಟ ಕಂಡುಬಂತು. ಈ ವೇಳೆ ಕೆಲವು ತಪ್ಪುಗಳನ್ನು ಎಸಗಿದ ಭಾರತದ ಆಟಗಾರ ಪಾಯಿಂಟ್ಸ್ ಕಳೆದುಕೊಂಡರು. ಆಗ, 17–14ರಲ್ಲಿ ಶೆಂಗ್ ಅವರು ಮುನ್ನಡೆ ಹೊಂದಿದ್ದರು.
ಆದರೆ, ಎದುರಾಳಿ ತಂತ್ರಗಳಿಗೆ ಪ್ರತಿತಂತ್ರ ಹೆಣೆದ ಅವರು ಪಾಯಿಂಟ್ಸ್ ಗಳಿಸಿದರು. ಅವರ ಸವಾಲನ್ನು ಮೀರಲು ವಿಫಲರಾದ ಕೆನಡಾದ ಆಟಗಾರ ಗೇಮ್ ಸೋತರು.
ಎರಡನೇ ಗೇಮ್‌ನಲ್ಲಿ ಕೆಲಹೊತ್ತು ಸಮಬಲದ ಹೋರಾಟ ಕಂಡುಬಂತು. ಆದರೆ, ಅಜಯ್ ಅವರು ಮನಮೋಹಕ ಸ್ಮ್ಯಾಷ್ ಹಾಗೂ ಧೀರ್ಘ ರ‍್ಯಾಲಿಗಳಿಂದ ಎದುರಾಳಿಯನ್ನು ಕಟ್ಟಿಹಾಕಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಇನ್ನೊಂದು ಕ್ವಾರ್ಟರ್‌ಫೈನಲ್ ಪೈಪೋಟಿಯಲ್ಲಿ ಮಿಥುನ್, 17–21, 21–19, 21–11ರಿಂದ ಚೀನಾದ ಜು ಜೆಕಿ ಅವರ ಎದುರು ಗೆದ್ದರು. ಈ ಪಂದ್ಯವು 56 ನಿಮಿಷಗಳ ಕಾಲ ನಡೆಯಿತು.
ಮುಂದಿನ ಪಂದ್ಯದಲ್ಲಿ ಅವರು ಇಂಡೊನೇಷ್ಯಾದ ಶೆಸಾರ್ ಹಿರೇನ್ ಋತ್ಸಾವಿಟೊ ಅವರೊಂದಿಗೆ ಸೆಣಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಭಾರತದ ರಿತುಪರ್ಣಾ ದಾಸ್, 19–21, 14–21ರಿಂದ ಥಾಯ್ಲೆಂಡ್‌ನ ಫಿಟ್ಟ್ಯಾಪರ್ನ್ ಚೈವಾನ್ ಅವರ ಎದುರು ಪರಾಭವಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.