ADVERTISEMENT

ಹಾಂಗ್‌ಝೌ ಓಪನ್ ಪುರುಷರ ಟೆನಿಸ್‌ ಟೂರ್ನಿ: ಜೀವನ್‌–ವಿಜಯ್ ಜೋಡಿಗೆ ಪ್ರಶಸ್ತಿ

ಪಿಟಿಐ
Published 24 ಸೆಪ್ಟೆಂಬರ್ 2024, 14:51 IST
Last Updated 24 ಸೆಪ್ಟೆಂಬರ್ 2024, 14:51 IST
ವಿಜಯಸುಂದರ್ ಪ್ರಶಾಂತ್‌ (ಬಲಗಡೆ) ಮತ್ತು ಜೀವನ್ ನೆಡುಂಚೆಳಿಯನ್
ವಿಜಯಸುಂದರ್ ಪ್ರಶಾಂತ್‌ (ಬಲಗಡೆ) ಮತ್ತು ಜೀವನ್ ನೆಡುಂಚೆಳಿಯನ್   

ನವದೆಹಲಿ: ಭಾರತದ ಜೀವನ್ ನೆಡುಂಚೆಳಿಯನ್ ಮತ್ತು ಅವರ ಜೊತೆಗಾರ ವಿಜಯ್ ಸುಂದರ್ ಪ್ರಶಾಂತ್ ಅವರು ಮೊದಲ ಬಾರಿ ಒಟ್ಟಾಗಿ ಎಟಿಪಿ ಟೂರ್ನಿಯೊಂದರಲ್ಲಿ ಪ್ರಶಸ್ತಿಯೊಂದನ್ನು ಗೆದ್ದುಕೊಂಡಿದ್ದಾರೆ. ಹಾಂಗ್‌ಝೌ ಓಪನ್ ಪುರುಷರ ಡಬಲ್ಸ್ ಟೂರ್ನಿಯ ಫೈನಲ್‌ನಲ್ಲಿ ಅವರು ಜರ್ಮನಿಯ ಜೋಡಿಯನ್ನು ಮಂಗಳವಾರ ಸೋಲಿಸಿದರು.

ಒಂದು ಗಂಟೆ 49 ನಿಮಿಷಗಳವರೆಗೆ ನಡೆದ ಫೈನಲ್‌ನಲ್ಲಿ ಶ್ರೇಯಾಂಕರಹಿತ ಜೀವನ್‌– ವಿಜಯ್ ಜೋಡಿ ಹಿನ್ನಡೆಯಿಂದ ಚೇತರಿಸಿಕೊಂಡು ಜರ್ಮನಿಯ ಕಾನ್‌ಸ್ಟಂಟೈನ್ ಫ್ರಾಂಟ್ಜೆನ್– ಹೆಂಡ್ರಿಕ್ ಜೆಬೆನ್ಸ್‌ ಜೋಡಿಯನ್ನು 4–6, 7–6 (5), 10–7 ರಿಂದ ಸೋಲಿಸಿದರು. ಜರ್ಮನಿಯ ಜೋಡಿ ಸಹ ಶ್ರೇಯಾಂಕ ಪಡೆದಿರಲಿಲ್ಲ.

35 ವರ್ಷ ವಯಸ್ಸಿನ ಜೀವನ್ ಅವರಿಗೆ ಇದು ಎರಡನೇ ಎಟಿಪಿ ಟೂರ್ ಪ್ರಶಸ್ತಿ. ಅವರು ಈ ಹಿಂದೆ, 2017ರಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಚೆನ್ನೈ ಓಪನ್‌ನಲ್ಲಿ ವಿಜೇತರಾಗಿದ್ದರು. ಇನ್ನೊಂದೆಡೆ ವಿಜಯ್‌ಗೆ ಒಲಿದ ಮೊದಲ ಎಟಿಪಿ ಪ್ರಶಸ್ತಿಯಿದು.

ADVERTISEMENT

ಮೊದಲ ಸೆಟ್‌ಅನ್ನು 4–6ರಲ್ಲಿ ಸೋತ ನಂತರ ಭಾರತದ ಜೋಡಿ ಪ್ರತಿರೋಧ ಪ್ರದರ್ಶಿಸಿತು. ಎರಡನೇ ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ ಪಡೆದು, ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಬೆಳೆಸಿದರು. ಇಲ್ಲಿ ಒತ್ತಡದ ನಡುವೆಯೂ ಸಂಯಮ ವಹಿಸಿ ಸೆಟ್ ಹಾಗೂ ಪಂದ್ಯ ತನ್ನದಾಗಿಸಿಕೊಂಡಿತು.

ಬಾಂಭ್ರಿ–ಒಲಿವೆಟ್ಟಿ ಜೋಡಿಗೆ ರನ್ನರ್ ಅಪ್‌ ಪ್ರಶಸ್ತಿ

ಯುಕಿ ಭಾಂಬ್ರಿ ಮತ್ತು ಫ್ರಾನ್ಸ್‌ನ ಅವರ ಜೊತೆಗಾರ ಅಲ್ಬಾನೊ ಒಲಿವೆಟ್ಟಿ ಅವರು ಈ ವರ್ಷ ಮೂರನೇ ಪ್ರಶಸ್ತಿಯನ್ನು ಮಂಗಳವಾರ ಚೀನಾದ ಚೆಂಗ್ಡುವಿನಲ್ಲಿ ಸ್ವಲ್ಪದರಲ್ಲೇ ಕಳೆದುಕೊಂಡರು. ತೀವ್ರ ಹೋರಾಟ ಕಂಡ ಚೆಂಗ್ಡು ಓಪನ್ ಟೆನಿಸ್‌ ಟೂರ್ನಿಯ ಡಬಲ್ಸ್‌ ಫೈನಲ್‌ನಲ್ಲಿ ಯುಕಿ– ಒಲಿವೆಟ್ಟಿ ಜೋಡಿ 4–6, 6–4, 4–10ರಲ್ಲಿ ಅಗ್ರ ಶ್ರೇಯಾಂಕದ ಸಾದಿಯೊ ದೌಂಬಿಯಾ– ಫ್ಯಾಬಿಯನ್ ರಿಬೊಲ್ ಜೋಡಿ ಎದುರು ಸೋಲನುಭವಿಸಿತು.

ಸುಮಾರು ಒಂದೂವರೆ ಗಂಟೆ ನಡೆದ ಫೈನಲ್‌ನಲ್ಲಿ ಗೆಲುವಿಗೆ ತೀವ್ರ ಹೋರಾಟ ನಡೆಸಿದ ಇಂಡೊ–ಫ್ರೆಂಚ್‌ ಜೋಡಿ ಎರಡನೇ ಸೆಟ್‌ ಗೆದ್ದುಕೊಂಡರೂ, ಅಂತಿಮ ಕ್ಷಣಗಳಲ್ಲಿ ತಪ್ಪುಗಳನ್ನು ಎಸಗಿತು. ಆರು ಡಬಲ್‌ ಫಾಲ್ಟ್‌ಗಳೂ ದುಬಾರಿಯಾದವು. ಇದು ಅಗ್ರ ಶ್ರೇಯಾಂಕದ ಫ್ರಾನ್ಸ್‌ ಜೋಡಿಗೆ  ಯುಕಿ–ಒಲಿವೆಟ್ಟಿ ವಿರುದ್ಧ ಮೊದಲ ಜಯ.

ಈ ವರ್ಷ ಯುಕಿ–ಒಲಿವೆಟ್ಟಿ ಜೋಡಿ ಆವೆ ಅಂಕಣದಲ್ಲಿ ನಡೆದ ಎರಡು ಎಟಿಪಿ ಟೂರ್ನಿಗಳಲ್ಲಿ ಜಯಶಾಲಿಯಾಗಿದೆ. ಜುಲೈನಲ್ಲಿ ಸ್ವಿಸ್‌ ಓಪನ್‌ ಮತ್ತು ಏಪ್ರಿಲ್‌ನಲ್ಲಿ ಮ್ಯೂನಿಕ್‌ನಲ್ಲಿ ನಡೆದ ಬಿಎಂಡಬ್ಲ್ಯು ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು.

ಬೀಜಿಂಗ್ ಓಪನ್: ಅರ್ಹತಾ ಸುತ್ತಿನಲ್ಲಿ ಹೊರಬಿದ್ದ ನಗಾಲ್

ಭಾರತದ ಅಗ್ರ ರ್‍ಯಾಂಕ್‌ನ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಬೀಜಿಂಗ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ಸೋಲನುಭವಿಸಿದರು. 52 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಪಾವೆಲ್ ಕೊಟೊವ್‌ (ರಷ್ಯಾ) ಅವರು 6–2 7–5 ರಿಂದ ನಗಾಲ್ ಅವರನ್ನು ಸೋಲಿಸಿದರು. ನಗಾಲ್ ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ ಪ್ರಸ್ತುತ 83ನೇ ಸ್ಥಾನದಲ್ಲಿದ್ದಾರೆ. ಕೊಟೊವ್‌ 63ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.