ದೋಹಾ: ಸ್ಪರ್ಧೆಯಲ್ಲಿ ಗೆದ್ದದ್ದು ಬೆಳ್ಳಿ ಪದಕ. ಆದರೆ ಈ ಹಣಾಹಣಿಯಲ್ಲಿ ಬೆಳಗಿದ್ದು ಹಲವು ದಾಖಲೆಗಳು. ಕತಾರ್ ಇಂಟರ್‌ನ್ಯಾಷನಲ್ ಕಪ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಯುವ ಪ್ರತಿಭೆ ಜೆರೆಮಿ ಲಾಲ್‌ರಿನ್ನುಂಗ ತಮ್ಮದೇ ಹೆಸರಿನಲ್ಲಿದ್ದ ದಾಖಲೆಗಳನ್ನು ಶುಕ್ರವಾರ ರಾತ್ರಿ ಮುರಿದರು.
67 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ 17 ವರ್ಷದ ಜೆರೆಮಿ ಸ್ನ್ಯಾಚ್, ಕ್ಲೀನ್ ಆ್ಯಂಡ್ ಜರ್ಕ್‌ನ ಯೂತ್ ವಿಭಾಗದಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ಮತ್ತು ಏಷ್ಯನ್ ದಾಖಲೆಗಳನ್ನು ಮುರಿದರು. ಅವರು ಒಟ್ಟು ಎತ್ತಿದ್ದು 306 ಕೆಜಿ (140ಕೆಜಿ+166 ಕೆಜಿ).
ಜೆರೆಮಿ ಅವರ ಸಾಧನೆಯಲ್ಲಿ ಯೂತ್ ವಿಭಾಗದ ತಲಾ ಮೂರು ವಿಶ್ವ ಮತ್ತು ಏಷ್ಯನ್ ದಾಖಲೆಗಳು, ಆರು ಕಾಮನ್‌ವೆಲ್ತ್ ದಾಖಲೆಗಳು ಸೇರಿವೆ. 15 ರಾಷ್ಟ್ರೀಯ ದಾಖಲೆಗಳು, ಐದು ಯೂತ್ ರಾಷ್ಟ್ರೀಯ ದಾಖಲೆಗಳು, ತಲಾ ಐದು ಜೂನಿಯರ್ ಹಾಗೂ ಸೀನಿಯರ್ ರಾಷ್ಟ್ರೀಯ ದಾಖಲೆಗಳನ್ನು ಅವರು ಉತ್ತಮಪಡಿಸಿಕೊಂಡರು.
ಮಿಜೋರಾಂ ಪ್ರತಿಭೆ: ಇಜಿಎಟಿ ಕಪ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಮಿಜೋರಾಂನ ಜೆರೆಮಿ ಈ ವರ್ಷದ ಪದಕ ಬೇಟೆ ಆರಂಭಿಸಿದ್ದರು. ಈ ಸ್ಪರ್ಧೆಯ ಸ್ನ್ಯಾಚ್‌ನಲ್ಲಿ 131 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 157 ಕೆಜಿ ಭಾರ ಎತ್ತಿದರು.
ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಯೂತ್ ವಿಭಾಗದ ವಿಶ್ವ ಮತ್ತು ಏಷ್ಯನ್ ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಅಲ್ಲಿ ಅವರು 297 ಕೆಜಿ ಭಾರ ಎತ್ತಿದರು (134+163). ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 296 ಕೆಜಿ (136+163) ಸಾಧನೆ ಮಾಡಿದ್ದರು. ನಂತರ ಏಷ್ಯನ್ ಯೂತ್ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.