ನವದೆಹಲಿ: ಭಾರತದ ಟಿ. ಮಾಧವನ್ ಮತ್ತು ಮುನಾ ನಾಯಕ್ ಅವರು ಐಡಬ್ಲ್ಯುಎಫ್ ವಿಶ್ವಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನ ಗಳಿಸಿದ್ದಾರೆ.
ಗ್ರೀಸ್‌ನ ಹೆರಾಕ್ಲಿಯೊನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 61 ಕೆಜಿ ವಿಭಾಗದಲ್ಲಿ ಮಂಗಳವಾರ ಮಾಧವನ್ 263 ಕೆಜಿ (118 ಕೆಜಿ ಸ್ನ್ಯಾಚ್ + 145 ಕೆಜಿ ಕ್ಲೀನ್ ಆ್ಯಂಡ್ ಜೆರ್ಕ್) ಭಾರ ಎತ್ತುವುದರೊಂದಿಗೆ ಕಂಚಿನ ಪದಕ ತಪ್ಪಿಸಿಕೊಂಡರು.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಮುನಾ 258 ಕೆಜಿ (113+145) ಭಾರ ಎತ್ತಿ ಆರನೇ ಸ್ಥಾನ ಗಳಿಸಿದರು. ಈ ವಿಭಾಗದಲ್ಲಿ ಅಮೆರಿಕದ ಹ್ಯಾಂಪ್ಟನ್ ಮೊರಿಸ್ 276 ಕೆಜಿ (116+160) ಸಾಧನೆಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.
ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ ಅವರು ವಿಶ್ವದಾಖಲೆ ಸ್ಥಾಪಿಸಿದರು. ಈ ಹಿಂದಿನ ದಾಖಲೆ ಉತ್ತರ ಕೊರಿಯಾದ ಕಿಮ್ ಚುಂಗ್ ಗುಕ್ (159 ಕೆಜಿ) ಹೆಸರಿನಲ್ಲಿತ್ತು.
ಮಹಿಳೆಯರ 55 ಕೆಜಿ ವಿಭಾಗದಲ್ಲಿ ಭಾರತದ ಶ್ರಬಣಿ ದಾಸ್ 181 ಕೆಜಿ (78+103) ಭಾರ ಎತ್ತುವುದರೊಂದಿಗೆ ಏಳನೇ ಸ್ಥಾನ ಗಳಿಸಿದರು. ಭಾರತ ಚಾಂಪಿಯನ್‌ಷಿಪ್‌ನಲ್ಲಿ ಈವರೆಗೆ ಮೂರು ಪದಕಗಳನ್ನು (ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚು) ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.