ಕೊವೆಂಟ್ರಿ : ಭಾರತದ ಎಲ್.ಸುಶೀಲಾ ದೇವಿ ಮತ್ತು ವಿಜಯ್ ಕುಮಾರ್ ಯಾದವ್ ಅವರು ಜೂಡೊ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.
ಸೋಮವಾರ ನಡೆದ ಮಹಿಳೆಯರ 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸುಶೀಲಾ ಅವರು ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ಎದುರು ಸೋತರು. 4.25 ನಿಮಿಷ ನಡೆದ ಹಣಾಹಣಿಯಲ್ಲಿ ಸುಶೀಲಾ, ಸೋಲುವ ಮುನ್ನ ಎದುರಾಳಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು.
27 ವರ್ಷದ ಸುಶೀಲಾ ಅವರು ಕಾಮನ್‌ವೆಲ್ತ್ ಕೂಟದಲ್ಲಿ ಗೆದ್ದ ಎರಡನೇ ಪದಕ ಇದು. 2014 ಗ್ಲಾಸ್ಗೊ ಕೂಟದಲ್ಲೂ ಅವರು ‘ರನ್ನರ್ ಅಪ್’ ಆಗಿ ಬೆಳ್ಳಿ ಪಡೆದಿದ್ದರು.
ಮಣಿಪುರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಸುಶೀಲಾ, ಕ್ವಾರ್ಟರ್ ಫೈನಲ್‌ನಲ್ಲಿ ಮಾಲವಿಯ ಹ್ಯಾರಿಯೆಟ್ ಬೊನಫೇಸ್ ವಿರುದ್ಧವೂ, ಸೆಮಿಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸಿಲ್ಲಾ ಮೊರಾಂಡ್ ಎದುರೂ ಗೆದ್ದಿದ್ದರು.
ಯಾದವ್ ಅವರು ಪುರುಷರ 60 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದರು. ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಅವರು ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೊಡೌಲಿಡೆಸ್ ಎದುರು ಗೆದ್ದರು. ಪ್ರಭಾವಿ ಪ್ರದರ್ಶನ ನೀಡಿದ ಅವರು ಕೇವಲ 58 ಸೆಕೆಂಡುಗಳಲ್ಲಿ ಗೆಲುವು ಒಲಿಸಿಕೊಂಡರು.
26 ವರ್ಷದ ಯಾದವ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೋಶುವ ಕಟ್ಜ್ ಎದುರು ಪರಾಭವಗೊಂಡಿದ್ದರು. ಆದರೆ ‘ರೀಪೇಜ್’ನಲ್ಲಿ ಗೆದ್ದು ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
ಪುರುಷರ 66 ಕೆ.ಜಿ. ವಿಭಾಗದಲ್ಲಿ ಜಸ್ಲೀನ್ ಸಿಂಗ್ ಸೈನಿ ಅವರು ಸೆಮಿಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಫಿನ್ಲೆ ಆ್ಯಲನ್ ಎದುರು ಪರಾಭವಗೊಂಡರು. ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ನೇಥನ್ ಕಟ್ಜ್ ಎದುರು ಸೆಣಸಾಡುವರು.
ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಸುಚಿಕಾ ತರಿಯಲ್ ಅವರು ಕಂಚಿನ ಪದಕಕ್ಕಾಗಿ ದಕ್ಷಿಣ ಆಫ್ರಿಕಾದ ಡೋನ್ ಬ್ರೆಟೆನ್‌ಬ್ಯಾಚ್ ಅವರನ್ನು ಎದುರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.