ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ (ಕೆಎಎ) ಮಹತ್ವಕಾಂಕ್ಷೆಯ ‘ವಿಷನ್–2022’ ಯೋಜನೆಯ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕೆಎಎ ಅಧ್ಯಕ್ಷ ಎನ್.ಮುತ್ತಪ್ಪ ರೈ ಮತ್ತು ನಟ ಪ್ರಕಾಶ್ ರಾಜ್ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
ಇದೇ ವೇಳೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಹಿರಿಯ ಅಥ್ಲೀಟ್ ಹಾಗೂ ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಷನ್‌ನ ನಿರ್ದೇಶಕ ಎಲ್ವಿಸ್ ಜೋಸೆಫ್ ಪದಗ್ರಹಣ ಮಾಡಿದರು.
ನವೀನ ತರಬೇತಿ ವಿಧಾನಗಳ ಅಳವಡಿಕೆಯ ಮೂಲಕ ಕರ್ನಾಟಕದ ಎಲ್ಲಾ ವಯೋಮಾನದ ಅಥ್ಲೀಟ್‌ಗಳು, ಕೋಚ್‌ಗಳು ಹಾಗೂ ನೆರವು ಸಿಬ್ಬಂದಿಗಳ ಸಾಮರ್ಥ್ಯ ವೃದ್ಧಿಸುವ ಉದ್ದೇಶದೊಂದಿಗೆ ಕೆಎಎ, ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಜೇಷನ್ (ಐಇಟಿಒ) ಮತ್ತು ಯುನೈಟೆಡ್ ಸ್ಟೇಟ್ಸ್ ಸ್ಪೋರ್ಟ್ಸ್ ಅಕಾಡೆಮಿಗಳ (ಯುಎಸ್‌ಎಸ್‌ಎ) ಜೊತೆಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದೆ. ಈ ಒಡಂಬಡಿಕೆಗೆ ಮುತ್ತಪ್ಪ ರೈ ಹಾಗೂ ಐಇಟಿಒ ಅಧ್ಯಕ್ಷ ಆಸೀಫ್ ಅವರು ಸಹಿ ಹಾಕಿದರು.
‘ಮುಂದಿನ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಅಥ್ಲೆಟಿಕ್ಸ್‌ನಲ್ಲಿ ಮಹತ್ವದ ಬದಲಾವಣೆ ತರುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಥ್ಲೆಟಿಕ್ ಸಂಸ್ಥೆಗಳು ಹಾಗೂ ಕ್ಲಬ್‌ಗಳ ಗುಣಮಟ್ಟ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೆಎಎಗೆ ವೃತ್ತಿಪರ ಸ್ಪರ್ಶ ನೀಡುವುದಕ್ಕೂ ಮುಂದಾಗಿದ್ದೇವೆ. 2022ರ ವೇಳೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೂಟಗಳಲ್ಲಿ ನಮ್ಮ ಕ್ರೀಡಾಪಟುಗಳು ಹೆಚ್ಚೆಚ್ಚು ಪದಕಗಳನ್ನು ಗೆಲ್ಲುವಂತಾಗಬೇಕು. ಇದಕ್ಕೆ ಅಗತ್ಯವಿರುವ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಒದಗಿಸಲು ಸಂಸ್ಥೆ ಸಿದ್ಧವಿದೆ’ ಎಂದು ಸಿಇಒ ಎಲ್ವಿಸ್ ತಿಳಿಸಿದರು.
‘ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಸಂಸ್ಥೆಗೆ ಯಾವ ಮೂಲಗಳಿಂದ ಆದಾಯ ಬರುತ್ತಿದೆ. ಯಾವ ಅಭಿವೃದ್ಧಿ ಯೋಜನೆಗಳಿಗೆ ಎಷ್ಟೆಷ್ಟು ವೆಚ್ಚ ಮಾಡಲಾಗುತ್ತಿದೆ ಎಂಬ ಮಾಹಿತಿ ಎಲ್ಲಾ ಸದಸ್ಯರು ಮತ್ತು ಅಥ್ಲೀಟ್‌ಗಳಿಗೆ ಸಿಗುವಂತಾಗಬೇಕು. ಈ ಉದ್ದೇಶದಿಂದ ಪ್ರತಿ ವರ್ಷವೂ ಆಯವ್ಯಯ ವರದಿ ಪ್ರಕಟಿಸಲು ತೀರ್ಮಾನಿಸಲಾಗಿದೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅಗತ್ಯ ನೆರವು ನೀಡಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.