ADVERTISEMENT

ಡಿಸ್ಕಸ್‌ ಥ್ರೊ: ಕಮಲ್‌ ಪ್ರೀತ್‌ಗೆ ಒಲಿಂಪಿಕ್ಸ್ ಅರ್ಹತೆ

ಪಿಟಿಐ
Published 19 ಮಾರ್ಚ್ 2021, 16:38 IST
Last Updated 19 ಮಾರ್ಚ್ 2021, 16:38 IST
ಕಮಲ್‌ಪ್ರೀತ್ ಕೌರ್‌
ಕಮಲ್‌ಪ್ರೀತ್ ಕೌರ್‌   

ಪಟಿಯಾಲ: ಡಿಸ್ಕಸ್ ಥ್ರೊ ಪಟು ಕಮಲ್‌ಪ್ರೀತ್ ಕೌರ್ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಇಲ್ಲಿ ನಡೆದ ಫೆಡರೇಷನ ಕಪ್‌ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಅವರು 65.06 ಮೀಟರ್‌ ದೂರ ಡಿಸ್ಕಸ್‌ ಎಸೆದು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಪಂಜಾಬ್‌ನ 25 ವರ್ಷದ ಕೌರ್, ತಮ್ಮ ಮೊದಲ ಯತ್ನದಲ್ಲೇ ಈ ಸಾಧನೆ ಮಾಡಿದರು. ಆದರೆ ಉಳಿದ ಐದು ಪ್ರಯತ್ನಗಳನ್ನು ಫೌಲ್ ಮಾಡಿದರು. ಒಲಿಂಪಿಕ್ಸ್ ಅರ್ಹತೆಗೆ 63.50 ಮೀ. ಮಾನದಂಡ ನಿಗದಿಪಡಿಸಲಾಗಿತ್ತು. 2018ರಲ್ಲಿ 61.04 ಮೀ. ದೂರ ಎಸೆದಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿತ್ತು.

ಇದಲ್ಲದೆ ಕೌರ್ ಅವರು ಒಂಬತ್ತು ವರ್ಷಗಳ ಹಿಂದೆ ಕೃಷ್ಣಾ ಪೂನಿಯಾ (64.76) ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮೀರಿದರು.

ADVERTISEMENT

ಈ ವಿಭಾಗದಲ್ಲಿ ಸೀಮಾ ಪೂನಿಯಾ (62.64 ಮೀ.) ಬೆಳ್ಳಿ ಗೆದ್ದುಕೊಂಡರೆ, ದೆಹಲಿಯ ಸೋನಾಲ್‌ ಗೋಯಲ್‌ (52.11 ಮೀ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಹಿಮಾಗೆ ಚಿನ್ನ: ಮಹಿಳೆಯರ 200 ಮೀಟರ್ ಓಟದಲ್ಲಿ ತಾರಾ ಅಥ್ಲೀಟ್, ಅಸ್ಸಾಂನ ಹಿಮಾ ದಾಸ್‌ ನೂತನ ಕೂಟ ದಾಖಲೆಯೊಂದಿಗೆ ಅಗ್ರಸ್ಥಾನ ಗಳಿಸಿದರು. 23.21 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. ಇದರೊಂದಿಗೆ ಸೆಮಿಫೈನಲ್‌ ಹೀಟ್‌ನಲ್ಲಿ ತಮಿಳುನಾಡಿನ ಎಸ್‌.ಧನಲಕ್ಷ್ಮಿ ಎದುರು ಅನುಭವಿಸಿದ್ದ ಹಿನ್ನಡೆಗೆ ಮುಯ್ಯಿ ತೀರಿಸಿಕೊಂಡರು.

ಧನಲಕ್ಷ್ಮಿ (23.39 ಸೆ.) ಬೆಳ್ಳಿ ಪದಕ ಗೆದ್ದರೆ, ಅರ್ಚನಾ ಸುಶೀಂದ್ರನ್‌ (23.60 ಸೆ.) ಕಂಚು ತಮ್ಮದಾಗಿಸಿಕೊಂಡರು.

ಮಹಿಳೆಯರ 200 ಮೀ. ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತೆಗೆ 22.80 ಸೆ. ಮಾನದಂಡ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.