ನವದೆಹಲಿ: ಭಾರತದ ಕರ್ಮನ್‌ಕೌರ್ ಥಾಂಡಿ ಅವರು ಅಮೆರಿಕದ ಇವಾನ್ಸ್‌ವಿಲೆ ಟೂರ್ನಿಯಲ್ಲಿ ಭಾನುವಾರ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದರು. ಇದು ಅವರಿಗೆ ವೃತ್ತಿ ಜೀವನದ ಎರಡನೇ ಡಬ್ಲ್ಯು60 ಐಟಿಎಫ್ ಪ್ರಶಸ್ತಿ ಆಗಿದೆ.
ಕರ್ಮನ್ ಕೌರ್ ಫೈನಲ್‌ನಲ್ಲಿ 7–5, 4–6, 6–1 ರಿಂದ ಉಕ್ರೇನ್‌ನ ಯುಲಿಲಾ ಸ್ಟಾರೊಡುಬುಟ್ಸೇವಾ ಅವರನ್ನು ಸೋಲಿಸಿದರು. ಅಮೆರಿಕದಲ್ಲಿ ವೃತ್ತಿಪರ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಎರಡನೇ ಆಟಗಾರ್ತಿ ಈಕೆ. ಸಾನಿಯಾ ಮಿರ್ಜಾ ಮೊದಲನೆಯವರು.
ಕೌರ್ ಅವರು ಮೊದಲ ಎಟಿಪಿ ಡಬ್ಲ್ಯು 60 ಪ್ರಶಸ್ತಿಯನ್ನು ಕೆನಡಾದ ಸಗುನೆಯಲ್ಲಿ ಕಳೆದ ವರ್ಷ ಜಯಿಸಿದ್ದರು. ಒಟ್ಟಾರೆ ಇದು ಅವರಿಗೆ ವೃತ್ತಿ ಜೀವನದ ನಾಲ್ಕನೇ ಪ್ರಶಸ್ತಿ.
ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ 261ನೇ ಸ್ಥಾನದಲ್ಲಿರುವ ಮತ್ತು ಭಾರತದಲ್ಲಿ ಎರಡನೇ ಕ್ರಮಾಂಕ ಹೊಂದಿರುವ ಅವರು, ಇವಾನ್ಸ್‌ವಿಲೆ ಟೂರ್ನಿಯ ಸೆಮಿಫೈನಲ್‌ನಲ್ಲಿ 6–4, 7–5 ರಿಂದ ಮೆಕಾರ್ಟ್ನಿ ಕೆಸ್ಲರ್ ಮೇಲೆ ಜಯಗಳಿಸಿದ್ದರು.
ಐಟಿಎಫ್ ಮಹಿಳಾ ವಿಶ್ವ ಟೂರ್‌ನಲ್ಲಿ ಡಬ್ಲ್ಯು60 ಟೂರ್ನಿಗಳು ಬಹುಮಾನ ಹಣದ ದೃಷ್ಟಿಯಿಂದ ಮಧ್ಯಮ ಹಂತದವು ಆಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.