ಉಡುಪಿ: ಪ್ಯಾರಾ ವಾಲಿಬಾಲ್ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ತಮಿಳುನಾಡು ಪ್ರಶಸ್ತಿ ಗೆದ್ದಿತು. ಆತಿಥೇಯ ಕರ್ನಾಟಕ ರನ್ನರ್ಸ್ ಅಪ್ ಆಯಿತು.
ಮಲ್ಪೆ ಬೀಚ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು ತಂಡವು 21–20, 21–16 ಪಾಯಿಂಟ್‌ಗಳಿಂದ ಜಯಿಸಿತು.
ಸೆಮಿಫೈನಲ್ ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದ ಕರ್ನಾಟಕ ‘ಬಿ’ ತಂಡಕ್ಕೆ ಸೋಲು ಆಘಾತ ನೀಡಿತು.
ಆರಂಭಿಕ ಸೆಟ್ ರೋಚಕ ಹಣಾಹಣಿಗೆ ಸಾಕ್ಷಿ ಆಗಿತ್ತು. ಎರಡೂ ತಂಡದ ಆಟಗಾರರು ಗೆಲುವಿಗಾಗಿ ಅಂತಿಮ ಕ್ಷಣದವರೆಗೂ ಕಸರತ್ತು ನಡೆಸಿದರು. ತಮಿಳುನಾಡು ಆರಂಭಿಕ ಸೆಟ್‌ನಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನಲ್ಲಿಯೂ ಬಿಗಿ ಹಿಡಿತ ಸಾಧಿಸಿ ಎದುರಾಳಿ ತಂಡಕ್ಕೆ ನಡುಕ ಹುಟ್ಟುವಂತೆ ಮಾಡಿತು.
ತಮಿಳುನಾಡು ತಂಡದ ನಾಯಕ ರಾಜೇಶ್ ಅವರ ಅದ್ಭುತ ಆಲ್‌ರೌಂಡ್ ಆಟವು ಟೂರ್ನಿಯಲ್ಲಿ ಗಮನ ಸೆಳೆಯಿತು. ತಂಡದ ಶಕ್ತಿಯಾಗಿ, ಉತ್ತಮ ಸರ್ವ್ ಹಾಗೂ ಸ್ಮಾಷ್‌ಗಳಿಂದ ಎಲ್ಲರ ಗಮನ ಸೆಳೆದರು.
ಫೈನಲ್ ಪಂದ್ಯಕ್ಕೂ ಮುನ್ನ ಆಂಧ್ರಪ್ರದೇಶ ‘ಎ’ ತಂಡದ ವಿರುದ್ಧದ ಸೆಮಿಫೈನಲ್‌ನಲ್ಲಿ ಕರ್ನಾಟಕ ಉತ್ತಮ ಪ್ರದರ್ಶನ ನೀಡಿತು. 21–16–19–21 ಹಾಗೂ 21–14 ಪಾಯಿಂಟ್ ಅಂತರದಲ್ಲಿ ಪಂದ್ಯ ಗೆದ್ದಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಮಾತ್ರ ಮುಗ್ಗರಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ತಮಿಳುನಾಡು 21–09, 21–5 ಪಾಯಿಂಟ್ ನೇರ ಸೆಟ್ ನಿಂದ ಮಣಿಸಿತು.
‘ವಿಶ್ವ ಸರಣಿ ಎದುರು ನೋಡುತ್ತಿದ್ದೇನೆ’
ಕರ್ನಾಟಕದ ನೆಲದಲ್ಲಿ ಬಲಿಷ್ಠ ತಂಡದ ವಿರುದ್ಧ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ. ಫೆಬ್ರುವರಿಯಲ್ಲಿ ಗೋವಾದಲ್ಲಿ ನಡೆಯಲಿರುವ ವಿಶ್ವ ಸರಣಿಯ ಪ್ಯಾರಾ ಬೀಚ್ ವಾಲಿಬಾಲ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ ಎಂದು ತಮಿಳುನಾಡು ತಂಡದ ನಾಯಕ ರಾಜೇಶ್ ಹೇಳಿದರು.
ಸರ್ಕಾರ ಸಾಮಾನ್ಯ ಕ್ರೀಡಾಪಟುಗಳಂತೆ ಅಂಗವಿಕಲ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡಬೇಕು. ಬೀಚ್ ವಾಲಿವಾಲ್ ಟೂರ್ನಿಗಳನ್ನು ಹೆಚ್ಚೆಚ್ಚು ಆಯೋಜಿಸಬೇಕು ಎಂದರು.
*
ತಮಿಳುನಾಡು ತಂಡ ನಿರೀಕ್ಷೆಗೂ ಮೀರಿ ಆಟವಾಡಿ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬರುವ ವಿಶ್ವಸೀರಿಸ್ ಟೂರ್ನಿಗೆ ಕಠಿಣ ಅಭ್ಯಾಸ ನಡೆಸಲಿದ್ದೇವೆ.
-ವಿಜಯ್‌ರಾವ್ ಶಿಂಧೆ, ಕರ್ನಾಟಕ ‘ಬಿ’ ತಂಡದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.