ADVERTISEMENT

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಅಭಿಯಾನ ಮುಗಿಸಿದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:12 IST
Last Updated 19 ನವೆಂಬರ್ 2024, 15:12 IST
Football.
Football.   

ಬೆಂಗಳೂರು: ಐದು ಬಾರಿಯ ಚಾಂಪಿಯನ್‌ ಕರ್ನಾಟಕ ತಂಡವು ಸಂತೋಷ್ ಟ್ರೋಫಿಗಾಗಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ 11–0 ಗೋಲುಗಳಿಂದ ಅಂಡಮಾನ್‌ ಮತ್ತು ನಿಕೋಬರ್‌ ತಂಡವನ್ನು ಸುಲಭವಾಗಿ ಮಣಿಸಿ, ಅಭಿಯಾನವನ್ನು ಮುಗಿಸಿತು.

ಅನಂತಪುರದ ಆರ್‌ಡಿಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಿಖಿಲ್‌ರಾಜ್‌ ಮುರುಗೇಶ್‌ ಕುಮಾರ್‌(32ನೇ, 39ನೇ, 85ನೇ ಮತ್ತು 90+3ನೇ ನಿಮಿಷ) ನಾಲ್ಕು ಮತ್ತು ರಯಾನ್ ವಿಲ್ಫ್ರೆಡ್ (67ನೇ, ಮತ್ತು 72 ನೇ ನಿ) ಎರಡು ಗೋಲು ಗಳಿಸಿದರು. ಉಳಿದಂತೆ ಕ್ರಿಸ್ಪಿನ್ ಸಿ ಕ್ಲೀಟಸ್ (16ನೇ), ಸೂರ್ಯ ಯು.ಕೆ. (60ನೇ), ಕಾರ್ತಿಕ್ ಗೋವಿಂದ್ ಸ್ವಾಮಿ (64ನೇ), ಸೈಯದ್ ಅಹಮದ್ (68ನೇ) ಮತ್ತು ಆಂಡ್ರ್ಯೂ ಗುರುಂಗ್ (90ನೇ) ತಲಾ ಒಂದು ಗೋಲು ದಾಖಲಿಸಿದರು.

ಜಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡವು 8–0 ಗೋಲುಗಳಿಂದ ಆತಿಥೇಯ ಆಂಧ್ರಪ್ರದೇಶ ತಂಡವನ್ನು ಮಣಿಸಿತು. ಆಡಿರುವ ಮೂರೂ ಪಂದ್ಯಗಳಲ್ಲಿ ಗೆದ್ದು 9 ಅಂಕ ಸಂಪಾದಿಸಿರುವ ತಮಿಳುನಾಡು ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಮುಂದಿನ ಸುತ್ತಿಗೆ ಪ್ರವೇಶಿಸಿತು. ಕರ್ನಾಟಕ ತಂಡವು ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಆರು ಅಂಕ ಗಳಿಸಿ ಎರಡನೇ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಬಿತ್ತು. ಹಿಂದಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧದ ಸೋಲು ದುಬಾರಿಯಾಯಿತು.

ADVERTISEMENT

9 ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ತಂಡಗಳು, ಕಳೆದ ಬಾರಿಯ ಚಾಂಪಿಯನ್‌ ಸರ್ವೀಸಸ್‌, ರನ್ನರ್‌ ಅಪ್‌ ಗೋವಾ, ಆತಿಥೇಯ ಆಂಧ್ರಪ್ರದೇಶ ಸೇರಿದಂತೆ ಒಟ್ಟು 12 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದವು. ತಲಾ ಆರು ತಂಡಗಳನ್ನು ಒಳಗೊಂಡ ಎರಡು ಗುಂಪುಗಳ ಮಧ್ಯೆ ರೌಂಡ್‌ ರಾಬಿನ್‌ ಪಂದ್ಯಗಳು ನಡೆಯಲಿದ್ದು, ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.