ADVERTISEMENT

ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌: ಚಾಂಪಿಯನ್‌ ಪಟ್ಟ ಉಳಿಸಿಕೊಂಡ ಕರ್ನಾಟಕ

ರಿಲೆಯಲ್ಲಿ ಕರ್ನಾಟಕ, ರೈಲ್ವೆ ತಂಡಗಳ ದಾಖಲೆ

ವಿಕ್ರಂ ಕಾಂತಿಕೆರೆ
Published 13 ಸೆಪ್ಟೆಂಬರ್ 2024, 16:03 IST
Last Updated 13 ಸೆಪ್ಟೆಂಬರ್ 2024, 16:03 IST
ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದ ಕರ್ನಾಟಕದ ಈಜುಪಟುಗಳ ಸಂಭ್ರಮ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದ ಕರ್ನಾಟಕದ ಈಜುಪಟುಗಳ ಸಂಭ್ರಮ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್   

ಮಂಗಳೂರು: ಆತಿಥೇಯ ಕರ್ನಾಟಕ, ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಕೂಟದಲ್ಲಿ ಒಟ್ಟು 17 ಚಿನ್ನ, 12 ಬೆಳ್ಳಿ ಮತ್ತು 4 ಕಂಚಿನ ಪದಕ ಗೆದ್ದ ಕರ್ನಾಟಕ ಸತತ ಎರಡನೇ ಬಾರಿ ಚಾಂಪಿಯನ್ ಆಯಿತು.

ಮಹಾರಾಷ್ಟ್ರ 6 ಚಿನ್ನ, ತಲಾ 4 ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯಿತು.

ಭಾರತ ಈಜು ಫೆಡರೇಷನ್, ಎಮ್ಮೆಕೆರೆಯ ಈಜುಕೊಳದಲ್ಲಿ ಆಯೋಜಿಸಿದ್ದ ಕೂಟದಲ್ಲಿ ಕರ್ನಾಟಕದ ಅನೀಶ್ ಎಸ್‌.ಗೌಡ ಮತ್ತು ಹಾಶಿಕಾ ರಾಮಚಂದ್ರ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಎನಿಸಿಕೊಂಡರು. 

ADVERTISEMENT

ಕೊನೆಯ ದಿನದ ಮೊದಲ ನಾಲ್ಕು ಸ್ಪರ್ಧೆಗಳ ಪೈಕಿ ಮೂರರಲ್ಲಿ ಕರ್ನಾಟಕ ಚಿನ್ನ ಗೆದ್ದುಕೊಂಡಿತು. ಮಹಿಳೆಯರ 400 ಮೀ. ವೈಯಕ್ತಿಕ ಮೆಡ್ಲೆಯ ಕೊನೆಯ ಲ್ಯಾಪ್‌ನಲ್ಲಿ ಬಿರುಸಿನ ಸ್ಟ್ರೋಕ್‌ಗಳೊಂದಿಗೆ ಮುನ್ನುಗ್ಗಿದ ತಾನ್ಯಾ ಷಡಕ್ಷರಿ ಚಿನ್ನಕ್ಕೆ ಮುತ್ತಿಟ್ಟರು. ಪುರುಷರ ಮತ್ತು ಮಹಿಳೆಯರ 200 ಮೀ ಫ್ರೀಸ್ಟೈಲ್‌ನ ಚಿನ್ನವೂ ಕರ್ನಾಟಕಕ್ಕೆ ಲಭಿಸಿತು. ಪುರುಷರ ವಿಭಾಗದಲ್ಲಿ ಅನೀಶ್ ಗೌಡ ಮೊದಲಿಗರಾದರು. ಮಹಿಳೆಯರ ವಿಭಾಗದಲ್ಲಿ ಹಾಶಿಕಾ ಮತ್ತು ಶಿರೀನ್ ನಡುವೆ ಚಿನ್ನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಹಾಶಿಕಾ ಅಂತಿಮ 20 ಮೀಟರ್‌ಗಳಿದ್ದಾಗ ಮುನ್ನುಗ್ಗಿ ಚಿನ್ನ ಗೆದ್ದರು. ತಮಿಳುನಾಡಿನ ಧನುಷ್ ಸುರೇಶ್ ಅವರಿಂದ ಕ್ಷಣಕ್ಷಣವೂ ಸವಾಲು ಎದುರಿಸಿದ ಕರ್ನಾಟಕದ ವಿದಿತ್ ಶಂಕರ್‌ 100 ಮೀ ಬ್ರೆಸ್ಟ್ ಸ್ಟ್ರೋಕ್‌ ರೇಸ್‌ನಲ್ಲಿ ಗೆದ್ದರು.

ಕರ್ನಾಟಕ, ರೈಲ್ವೆ ಕೂಟ ದಾಖಲೆ: ಕೊನೆಯ ದಿನ ಬೆಳಿಗ್ಗೆ ನಡೆದ ಪುರುಷರ 4x100 ಮೀ. ಫ್ರೀಸ್ಟೈಲ್ ರಿಲೆಯಲ್ಲಿ ಕರ್ನಾಟಕ ದಾಖಲೆ ಬರೆಯಿತು. ಪೃಥ್ವಿ ಎಂ, ಕಾರ್ತಿಕೇಯನ್ ನಾಯರ್‌, ಆಕಾಶ್ ಮಣಿ ಮತ್ತು ಶ್ರೀಹರಿ ನಟರಾಜ್ ಅವರನ್ನು ಒಳಗೊಂಡ ತಂಡ 3 ನಿ 28.9 ಸೆಕೆಂಡುಗಳ ಸಾಧನೆಯೊಂದಿಗೆ ತನ್ನದೇ ದಾಖಲೆ (3:28.16) ಉತ್ತಮಪಡಿಸಿಕೊಂಡಿತು. ಮಹಿಳೆಯರ 4x100 ಮೀ ಫ್ರೀಸ್ಟೈಲ್ ರಿಲೆಯಲ್ಲಿ ರೈಲ್ವೆ ದಾಖಲೆ ಬರೆಯಿತು. ಕರ್ನಾಟಕ ಬೆಳ್ಳಿ ಗೆದ್ದುಕೊಂಡಿತು.

ನಾಲ್ಕನೇ ದಿನದ ಫಲಿತಾಂಶ

ಪುರುಷರ ವಿಭಾಗ

100 ಮೀ ಬ್ರೆಸ್ಟ್‌ ಸ್ಟ್ರೋಕ್‌: ವಿದಿತ್ ಎಸ್‌.ಶಂಕರ್‌ (ಕರ್ನಾಟಕ)–1, ಧನುಷ್‌ (ತಮಿಳುನಾಡು)–2, ರಾಣಾ ಪ್ರತಾಪ್‌ (ಜಾರ್ಖಂಡ್‌)–3. ಕಾಲ: 1ನಿ 2.75ಸೆ

100 ಮೀ ಬಟರ್‌ಫ್ಲೈ: ಮಿಹಿರ್ ಆಮ್ರೆ (ಮಹಾರಾಷ್ಟ್ರ)–1, ಬೆನೆಡಿಕ್ಟನ್ ರೋಹಿತ್ (ತಮಿಳುನಾಡು)–2, ಬಿಕ್ರಂ ಚಾಂಗ್ಮೈ (ರೈಲ್ವೆ)–3. ಕಾಲ: 53.68ಸೆ

200 ಮೀ ಫ್ರೀಸ್ಟೈಲ್‌: ಅನೀಶ್ ಗೌಡ (ಕರ್ನಾಟಕ)–1, ಆನಂದ್‌ (ಸರ್ವಿಸಸ್‌)–2, ದೇವಾಂಶ್‌ (ರೈಲ್ವೆ)–3. ಕಾಲ: 1ನಿ 52.9ಸೆ

200 ಮೀ ಬ್ಯಾಕ್‌ಸ್ಟ್ರೋಕ್‌: ನಿತಿಕ್ (ತಮಿಳುನಾಡು)–1, ರಿಷಭ್‌ (ಮಹಾರಾಷ್ಟ್ರ)–2, ಆಕಾಶ್ ಮಣಿ (ಕರ್ನಾಟಕ)–3. ಕಾಲ: 2ನಿ 3.47ಸೆ

400 ಮೀ ಮೆಡ್ಲೆ: ಯುಗ್ ಚಲಾನಿ (ರಾಜಸ್ತಾನ)–1, ಸಾಮದೇವ್‌ (ಆಂಧ್ರಪ್ರದೇಶ)–2, ವರ್ಷಿತ್‌ (ತೆಲಂಗಾಣ)–3. ಕಾಲ: 4ನಿ 36.39ಸೆ

4x100 ಮೀ ಫ್ರೀಸ್ಟ್ರೈಲ್ ರಿಲೆ: ಕರ್ನಾಟಕ (ಪೃಥ್ವಿ, ಕಾರ್ತಿಕೇಯನ್, ಆಕಾಶ್, ಶ್ರೀಹರಿ ನಟರಾಜ್‌)–1, ಸರ್ವಿಸಸ್‌–2, ತಮಿಳುನಾಡು–3. ಕಾಲ: 3ನಿ 28.9ಸೆ (ಕೂಟ ದಾಖಲೆ).

ಮಹಿಳೆಯರ ವಿಭಾಗ

100 ಮೀ ಬ್ರೆಸ್ಟ್‌ ಸ್ಟ್ರೋಕ್‌: ಹರ್ಷಿತಾ (ರೈಲ್ವೆ)–1, ಮನ್ನತಾ ಮಿಶ್ರಾ (ಒಡಿಶಾ)–2, ಜ್ಯೋತಿ  (ಮಹಾರಾಷ್ಟ್ರ)–3. ಕಾಲ: 1ನಿ 14.16ಸೆ

100 ಮೀ ಬಟರ್‌ಫ್ಲೈ: ಆಸ್ತಾ (ರೈಲ್ವೆ)–1, ಸೃಷ್ಟಿ (ಒಡಿಶಾ)–2, ಸುಹಾಸಿನಿ ಘೋಷ್‌ (ಕರ್ನಾಟಕ)–3. ಕಾಲ: 1ನಿ 3.87ಸೆ

200 ಮೀ ಫ್ರೀಸ್ಟೈಲ್‌: ಹಾಶಿಕಾ ರಾಮಚಂದ್ರ (ಕರ್ನಾಟಕ)–1, ಅದಿತಿ (ಮಹಾರಾಷ್ಟ್ರ)–2, ವೃತ್ತಿ (ತೆಲಂಗಾಣ)–3. ಕಾಲ: 2ನಿ 6.49ಸೆ

200 ಮೀ ಬ್ಯಾಕ್‌ಸ್ಟ್ರೋಕ್‌: ಸೌಬೃತಿ (ಬಂಗಾಳ)–1, ಪ್ರತ್ಯಾಷಾ (ಒಡಿಶಾ)–2, ಪ್ರತಿಷ್ಠಾ (ಮಹಾರಾಷ್ಟ್ರ)–3. ಕಾಲ: 2ನಿ 21.76ಸೆ

400 ಮೀ ಮೆಡ್ಲೆ: ತಾನ್ಯಾ ಷಡಕ್ಷರಿ (ಕರ್ನಾಟಕ)–1, ಸಾನ್ವಿ (ಮಹಾರಾಷ್ಟ್ರ)–2, ಶ್ರೀನಿಧಿ (ತಮಿಳುನಾಡು)–3. ಕಾಲ: 5ನಿ 8.10ಸೆ

4x100 ಮೀ ಫ್ರೀಸ್ಟೈಲ್‌: ರೈಲ್ವೆ–1, ಕರ್ನಾಟಕ (ಶಿರೀನ್‌, ವಿಹಿತಾ, ಶಾಲಿನಿ, ಹಾಶಿಕಾ)–2, ಮಹಾರಾಷ್ಟ್ರ–3. ಕಾಲ: 4ನಿ 1.83ಸೆ (ಕೂಟ ದಾಖಲೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.