ಕೊಪ್ಪಳ: ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಈಗಾಗಲೇ ಹಲವು ಬಾರಿ ಸ್ಪರ್ಧೆ ಮಾಡಿರುವ ಕೊಪ್ಪಳದ ಹ್ಯಾಮರ್ ಥ್ರೋ ಅಥ್ಲೀಟ್ ಸಚಿನ್ ಬೆಂಗಳೂರಿನಲ್ಲಿ ಜರುಗಿದ ಪುರುಷರ ಮತ್ತು ಮಹಿಳೆಯರ ರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ.
ಮೂರು ದಿನಗಳ ಹಿಂದೆ ನಡೆದ ಸ್ಪರ್ಧೆಯಲ್ಲಿ ಅವರು 58.69 ಮೀಟರ್ ದೂರ ಡಿಸ್ಕ್ ಎಸೆಯುವ ಮೂಲಕ ಈ ದಾಖಲೆ ಮಾಡಿ ಒಂಬತ್ತು ವರ್ಷಗಳ ಹಿಂದೆ ಅಜೀಜ್ ಅಹ್ಮದ್ (ದೂರ: 57.46 ಮೀ) ಎಂಬುವರು ನಿರ್ಮಿಸಿದ ದಾಖಲೆ ಅಳಿಸಿ ಹಾಕಿದ್ದಾರೆ.
ನಗರದಲ್ಲಿರುವ ಸೀಮಿತ ಕ್ರೀಡಾ ಸೌಲಭ್ಯಗಳ ನಡುವೆಯೂ ಕಠಿಣ ಅಭ್ಯಾಸ ಮಾಡುತ್ತಿರುವ ಸಚಿನ್ ಸತತ ಎರಡು ಬಾರಿ ರಾಷ್ಟ್ರೀಯ ಮಟ್ಟದ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದರು. ಹಿಂದಿನ ರಾಜ್ಯಮಟ್ಟದ ಓಪನ್ ಟೂರ್ನಿಯಲ್ಲಿ 56.24 ಮೀಟರ್ ಎಸೆದು ಅಗ್ರಸ್ಥಾನ ಸಂಪಾದಿಸಿದ್ದರು. ಮಂಗಳೂರಿನಲ್ಲಿ ನಡೆದ ರಾಜ್ಯ ಜೂನಿಯರ್, ಯೂತ್ ಅಥ್ಲೆಟಿಕ್ಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡಿದ್ದರು. ಈಗ ಕೂಟ ದಾಖಲೆ ನಿರ್ಮಿಸುವ ಜೊತೆಗೆ ಮತ್ತೊಂದು ಮೈಲಿಗಲ್ಲು ದಾಖಲಿಸಿದ್ದಾರೆ.
’ಸಾಕಷ್ಟು ಸ್ಪರ್ಧೆಯಿದ್ದ ಕ್ರೀಡಾಕೂಟದಲ್ಲಿ ನೂತನ ಕೂಟದ ದಾಖಲೆ ಜೊತೆ ಪದಕ ಜಯಿಸಿದ್ದು ಖುಷಿ ಮೂಡಿಸಿದೆ. ಮತ್ತಷ್ಟು ಸಾಧನೆಗೆ ಪ್ರೇರಣೆಯೂ ಆಗಿದೆ. ಇನ್ನಷ್ಟು ಕಠಿಣ ಅಭ್ಯಾಸ ಮಾಡುವೆ’ ಎಂದು ಸಚಿನ್ ಹೇಳಿದರು.
ಪದಕ ಗೆದ್ದ ಅಮ್ಮ, ಮಗಳು: ಬಳ್ಳಾರಿಯಲ್ಲಿ ನಡೆದ ಬಳ್ಳಾರಿ ಸ್ಟೀಲ್ ಸಿಟಿ ಓಟದ ಸ್ಪರ್ಧೆಯಲ್ಲಿ ಗಂಗಾವತಿಯ ರನ್ನರ್ಸ್ ಯುನಿಟಿ ಅಧಿಕೃತ ತಂಡದ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಅದರಲ್ಲಿ 14ರಿಂದ 17 ವರ್ಷದ ಒಳಗಿನವರ ಸ್ಪರ್ಧೆಯಲ್ಲಿ ದೇವಿಕಾ ಎಸ್. ದ್ವಿತೀಯ ಸ್ಥಾನ, 35ರಿಂದ 49ರ ವಯಸ್ಸಿನ ಒಳಗಿನವರ ಸ್ಪರ್ಧೆಯಲ್ಲಿ ರಂಗಮ್ಮ ಷಣ್ಮುಖಪ್ಪ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ 11 ರಾಜ್ಯಗಳು, ನಾಲ್ಕು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
‘ಒಂದೇ ಕ್ರೀಡಾಕೂಟದಲ್ಲಿ ದೇವಿಕಾ ಬೆಳ್ಳಿ ಹಾಗೂ ರಂಗಮ್ಮ ಕಂಚು ತಾಯಿ ಮಗಳು ಪದಕ ಜಯಿಸಿದ್ದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳ ಸಾಧನೆ ಶ್ಲಾಘನಾರ್ಹ’ ಎಂದು ಗಂಗಾವತಿ ತಂಡದ ತರಬೇತುದಾರ ಷಣ್ಮುಖಪ್ಪ ಸಾವಂತಗೇರಿ ಖುಷಿ ವ್ಯಕ್ತಪಡಿಸಿದರು.
ವಿವಿಧ ಕ್ರೀಡಾಕೂಟಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿರುವುದು ಖುಷಿಯ ವಿಷಯ. ಇನ್ನಷ್ಟು ಸಾಧನೆ ಹೊರಹೊಮ್ಮಲಿ ಎನ್ನುವ ಅಶಯ ನನ್ನದು.
-ವಿಠ್ಠಲ ಜಾಬಗೌಡರ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ
ಕರಾಟೆಯಲ್ಲಿ ಸಾಧನೆ
ಕೊಪ್ಪಳ: ಶಿವಮೊಗ್ಗದ ಎ.ಝಡ್. ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇತ್ತೀಚೆಗೆ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಆಹ್ವಾನಿತ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಭೂಮಿ ಕರಾಟೆ ಫೌಂಡೇಷನ್ ಕರಾಟೆ ಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ತಿರುಮಲೇಶ ಅಚ್ಯುತ್ ವಿಕಾಸ ಶಂಕರ ರೇಣುಕಾ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಫೌಂಡೇಷನ್ ಅಧ್ಯಕ್ಷ ಮೌನೇಶ ಎಸ್.ವಿ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.