ಪಣಜಿ: ಕರ್ನಾಟಕದ ಸಿಮ್ರಾನ್ ಮತ್ತು ಶರಣ್ಯಾ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕ್ರಮವಾಗಿ ಎಸ್6 ಮತ್ತು ಎಸ್7 ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.
ಸ್ಪರ್ಧೆಯ ಎರಡನೇ ದಿನವಾದ ಸೋಮವಾರ ಸಿಮ್ರಾನ್ 1 ನಿಮಿಷ 0.35 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಒಡಿಶಾದ ಕವಿತಾ ಮತ್ತು ತಮಿಳುನಾಡಿನ ಗಜಪ್ರಿಯಾ ಎಸ್ 6 ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಎಸ್7 ವಿಭಾಗದಲ್ಲಿ ಶರಣ್ಯಾ 1 ನಿಮಿಷ 1.46 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. ರಾಜಸ್ಥಾನದ ಡಿಂಪಲ್ ಮತ್ತು ಕರ್ನಾಟಕದ ಪಂಕಜಾ ಕ್ರಮವಾಗಿ ನಂತರದ ಸ್ಥಾನ ಪಡೆದರು.
ಎಸ್ 8 ವಿಭಾಗದಲ್ಲಿ ರಾಜಸ್ಥಾನದ ಪೂರನ್ (56.69 ಸೆಕೆಂಡ್) ಚಿನ್ನ ಗೆದ್ದರೆ, ಪಶ್ಚಿಮ ಬಂಗಾಳದ ತೌಫಿಕಾ ಮತ್ತು ಮಹಾರಾಷ್ಟ್ರದ ವೈಷ್ಣವಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.
ಎಸ್ 9 ವಿಭಾಗದಲ್ಲಿ ರಾಜಸ್ಥಾನದ ಕಿರಣ್ (52.18 ಸೆಕೆಂಡ್), ಒಡಿಶಾದ ಭಾನುಮತಿ ಮತ್ತು ಪಶ್ಚಿಮ ಬಂಗಾಳದ ಸಾಹಿದ್ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರು.
ಪುರುಷರ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯ ಎಸ್ 11 ವಿಭಾಗದಲ್ಲಿ ಕೇರಳದ ಟಾಮಿ ಜೋಸೆಫ್ (54.45ಸೆ) ಚಿನ್ನ ಗೆದ್ದರೆ, ಒಡಿಶಾದ ರಂಜನ್ ಕುಮಾರ್ ಮತ್ತು ದೆಹಲಿಯ ಮುನ್ನಾ ನಂತರದ ಸ್ಥಾನ ಪಡೆದರು.
ಎಸ್ 12 ವಿಭಾಗದಲ್ಲಿ ಪಶ್ಚಿಮ ಬಂಗಾಳದ ಬಿಸ್ವಜಿತ್ ಚಿನ್ನ ಗೆದ್ದುಕೊಂಡರೆ, ರಾಜಸ್ಥಾನದ ಭಗೀರಥ ಮತ್ತು ಗಣೇಶ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.