ಇಂಚೇನ್: ಜಪಾನ್‌ನ ಕೆಂಟೊ ಮೊಮೊಟಾ ಅವರಿಗೆ ನೇರ ಗೇಮ್‌ಗಳಿಂದ ಮಣಿದ ಭಾರತದ ಪರುಪಳ್ಳಿ ಕಶ್ಯಪ್, ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆರಂಭದಿಂದಲೇ ಭರವಸೆಯಿಂದ ಮುನ್ನುಗ್ಗಿ ಸೆಮಿಫೈನಲ್ ಪ್ರವೇಶಿಸಿದ್ದ ಕಶ್ಯಪ್ ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ 13–21, 15–21ರಲ್ಲಿ ಸೋತರು. ಈ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ಕಶ್ಯಪ್ ಮತ್ತು ಮೊಮೊಟಾ ನಾಲ್ಕು ವರ್ಷಗಳ ಹಿಂದೆ ಇಂಡೊನೇಷ್ಯಾ ಓಪನ್‌ನಲ್ಲಿ ಕೊನೆಯದಾಗಿ ಮುಖಾಮುಖಿಯಾಗಿದ್ದರು. ಆ ಪಂದ್ಯವೂ ಸೇರಿದಂತೆ ಮೊಮೊಟಾ ವಿರುದ್ಧ ಆಡಿದ್ದ ಎರಡೂ ಪಂದ್ಯಗಳನ್ನು ಭಾರತದ ಆಟಗಾರ ಗೆದ್ದಿದ್ದರು. ಆದರೆ ಶನಿವಾರ ಕೇವಲ 40 ನಿಮಿಷಗಳಲ್ಲಿ ಕಶ್ಯಪ್ ಅವರನ್ನು ಜಪಾನ್ ಆಟಗಾರ ಮಣಿಸಿದರು.
ಮೊದಲ ಗೇಮ್‌ನ ಆರಂಭದಲ್ಲಿ 9–5ರಲ್ಲಿ ಮೊಮೊಟಾ ಮುನ್ನಡೆದಿದ್ದರೂ ನಂತರ ಚೇತರಿಸಿಕೊಂಡ ಕಶ್ಯಪ್ ಆಕರ್ಷಕ ರಿಟರ್ನ್‌ಗಳ ಮೂಲಕ ಗಮನ ಸೆಳೆದು ಪಾಯಿಂಟ್‌ಗಳನ್ನು ಗಳಿಸಿದರು. ಹೀಗಾಗಿ ವಿರಾಮದ ವೇಳೆ ಹಿನ್ನಡೆಯನ್ನು 7–11ಕ್ಕೆ ತಗ್ಗಿಸಿದರು. ಆದರೆ ನಂತರ ಅವರಿಂದ ನಿರೀಕ್ಷಿತ ಸಾಮರ್ಥ್ಯ ಕಂಡುಬರಲಿಲ್ಲ. ಹೀಗಾಗಿ ಮೊಮೊಟಾ 18–10ರ ಮುನ್ನಡೆಯೊಂದಿಗೆ ನಿರಾಳವಾದರು; ಸುಲಭವಾಗಿ ಗೇಮ್ ತನ್ನದಾಗಿಸಿಕೊಂಡರು.
ಎರಡನೇ ಗೇಮ್‌ನಲ್ಲಿ ಮೊಮೊಟಾ ಇನ್ನಷ್ಟು ಚುರುಕಿನ ಆಟವಾಡಿದರು. ಹೀಗಾಗಿ 7–2ರ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ತಾಳ್ಮೆ ಕಳೆದುಕೊಳ್ಳದ ಕಶ್ಯಪ್ ವಿರಾಮದ ವೇಳೆ 7–11ರ ಹಿನ್ನಡೆ ಅನುಭವಿಸಿದರು. ನಂತರ ಚೇತರಿಸಿಕೊಳ್ಳಲು ಆಗದೆ ಸೋಲೊಪ್ಪಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.