ಇಂಚೇನ್: ಭಾರತದ ಪರುಪಳ್ಳಿ ಕಶ್ಯಪ್ ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಅವರು ಮಲೇಷ್ಯಾದ ಡರೆನ್ ಲ್ಯೂ ಎದುರು 21–17, 11–21, 21–12ರಲ್ಲಿ ಗೆದ್ದರು.
56 ನಿಮಿಷದಲ್ಲಿ ಮುಗಿದ ಪಂದ್ಯದ ಆರಂಭದಲ್ಲಿ 33 ವರ್ಷದ ಕಶ್ಯಪ್ 2–4ರ ಹಿನ್ನಡೆಯಲ್ಲಿದ್ದರು. ನಂತರ ಚೇತರಿಸಿಕೊಂಡು 11–8ರ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾದರು. ವಿರಾಮದ ನಂತರ ಸತತ 4 ಪಾಯಿಂಟ್ ಕಲೆ ಹಾಕಿದ ಅವರು ಅದೇ ಲಯವನ್ನು ಮುಂದುವರಿಸಿ ಮೊದಲ ಗೇಮ್ ಸುಲಭವಾಗಿ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್‌ನಲ್ಲಿ ಡರೆನ್ ಭರ್ಜರಿ ಆಟವಾಡಿದರು. ಉತ್ತರಿಸಲಾಗದ ಕಶ್ಯಪ್ ಕೇವಲ 11 ಪಾಯಿಂಟ್ ಗಳಿಸಿ ಸೋಲೊಪ್ಪಿಕೊಂಡರು. ಆದರೆ ಮೂರನೇ ಗೇಮ್‌ನಲ್ಲಿ ಕಶ್ಯಪ್ ಆಕ್ರಮಣಕಾರಿ ಆಟವಾಡಿ ಗೆಲುವು ತಮ್ಮದಾಗಿಸಿಕೊಂಡರು.
ಜಾರ್ಜೆನ್ಸನ್ ಎದುರಾಳಿ: ಎಂಟರ ಘಟ್ಟದ ಪಂದ್ಯದಲ್ಲಿ ಕಶ್ಯಪ್ ವಿಶ್ವ ಕ್ರಮಾಂಕದ ಎರಡನೇ ಸ್ಥಾನದಲ್ಲಿರುವ ಡೆನ್ಮಾರ್ಕ್ ಆಟಗಾರ ಜಾನ್ ಜಾರ್ಜೆನ್ಸನ್ ಸವಾಲನ್ನು ಎದುರಿಸಬೇಕಾಗಿದೆ. ಜಾರ್ಜೆನ್ಸನ್ ಮತ್ತು ಕಶ್ಯಪ್ ಡೆನ್ಮಾರ್ಕ್ ಓಪನ್‌ನಲ್ಲಿ 5 ವರ್ಷಗಳ ಹಿಂದೆ ಕೊನೆಯದಾಗಿ ಸೆಣಸಿದ್ದರು.
ಗುರುವಾರದ ಪಂದ್ಯದಲ್ಲಿ 31 ವರ್ಷದ ಜಾರ್ಜೆನ್ಸನ್ ಎಂಟನೇ ಶ್ರೇಯಾಂಕಿತ ಆಟಗಾರ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕ ಜಿಂಟಿಂಗ್ ವಿರುದ್ಧ 17–21, 21–16, 21–13ರಲ್ಲಿ ಗೆದ್ದಿದ್ದರು. ಜಾರ್ಜೆನ್ಸನ್ ಮತ್ತು ಕಶ್ಯಪ್ ಈ ವರೆಗೆ ಒಟ್ಟು 6 ಬಾರಿ ಮುಖಾಮುಖಿಯಾಗಿದ್ದು 4 ಪಂದ್ಯಗಳಲ್ಲಿ ಕಶ್ಯಪ್ ಸೋತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.