ತೈಪೆ: ಪಿ.ಕಶ್ಯಪ್ ಮತ್ತು ತನಿಶಾ ಕ್ರಾಸ್ತೊ ಅವರು ಇಲ್ಲಿ ನಡೆಯುತ್ತಿರುವ ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕಶ್ಯಪ್ 12-21, 21-12, 17-21ರಲ್ಲಿ ಮಲೇಷ್ಯದ ಸೂಂಗ್ ಜೂ ವೆನ್ ಕೈಯಲ್ಲಿ ಪರಾಭವಗೊಂಡರು.
ಇಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಭಾರತದ ಆಟಗಾರ 55 ನಿಮಿಷಗಳಲ್ಲಿ ಸೋಲೊಪ್ಪಿಕೊಂಡರು. ಮೊದಲ ಗೇಮ್ ಸೋತ ಕಶ್ಯಪ್, ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಶಿಸ್ತಿನ ಆಟವಾಡುವಲ್ಲಿ ವಿಫಲರಾದರು.
ತನಿಶಾ ಅವರಿಗೆ ಮಹಿಳಾ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ನಿರಾಸೆ ಎದುರಾಯಿತು. ಮಿಶ್ರ ಡಬಲ್ಸ್‌ನಲ್ಲಿ ತನಿಶಾ– ಇಶಾನ್ ಭಟ್ಕಾಗರ್ ಜೋಡಿ 19–21– 12–21 ರಲ್ಲಿ ಮಲೇಷ್ಯದ ಹು ಪಾಂಗ್ ರಾನ್– ತೊ ಇ ವೀ ಎದುರು ಸೋತಿತು. ಈ ಪಂದ್ಯ 32 ನಿಮಿಷಗಳಲ್ಲಿ ಕೊನೆಗೊಂಡಿತು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತನಿಶಾ– ಶ್ರುತಿ ಮಿಶ್ರಾ 16-21, 22-20, 18-21 ರಲ್ಲಿ ಹಾಂಗ್‌ಕಾಂಗ್‌ನ ಎಂಗ್ ತ್ಸೆ ಯು– ತ್ಸಾಂಗ್ ಹು ಯಾನ್ ಎದುರು ಪರಾಭವಗೊಂಡಿತು. ಒಂದು ಗಂಟೆ ನಡೆದ ಹೋರಾಟದಲ್ಲಿ ಭಾರತದ ಜೋಡಿ ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.