ಇಂಚೇನ್: ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ನಂತರ ಸತತ ಎರಡನೇ ಟೂರ್ನಿಯಲ್ಲೂ ಭಾರತದ ಪಿ.ವಿ.ಸಿಂಧು ನಿರಾಸೆ ಅನುಭವಿಸಿದರು. ಸೈನಾ ನೆಹ್ವಾಲ್ ಮತ್ತು ಬಿ.ಸಾಯಿ ಪ್ರಣೀತ್ ಅವರಿಗೆ ಅನಾರೋಗ್ಯದಿಂದಾಗಿ ಪಂದ್ಯವನ್ನು ಪೂರ್ತಿಗೊಳಿಸಲಾಗಲಿಲ್ಲ. ಇಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲು ಉಳಿದಿರುವವರು ಪರುಪಳ್ಳಿ ಕಶ್ಯಪ್ ಮಾತ್ರ.
ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕಶ್ಯಪ್ 21–16, 21–16ರಲ್ಲಿ ಚೀನಾ ತೈಪೆಯ ಲು ಚಿಯಾ ಹಂಗ್ ಎದುರು ಗೆಲುವು ಸಾಧಿಸಿದರು. 42 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಭಾರತದ ಆಟಗಾರ ನಿರಾಯಾಸವಾಗಿ ಜಯ ತಮ್ಮದಾಗಿಸಿಕೊಂಡರು.
ಕಳೆದ ವಾರ ನಡೆದಿದ್ದ ಚೀನಾ ಓಪನ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಹೊರಬಿದ್ದಿದ್ದ ಸಿಂಧು ಬುಧವಾರದ ಪಂದ್ಯದಲ್ಲಿ ಅಮೆರಿಕದ ಬಿವೆನ್ ಜಾಂಗ್ ವಿರುದ್ಧ 7–21, 24–22, 15–21ರಲ್ಲಿ ಸೋತರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಯಿ ಪ್ರಣೀತ್ ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್ ವಿರುದ್ಧದ ಪಂದ್ಯದಲ್ಲಿ 9–21, 7–11ರ ಹಿನ್ನಡೆಯಲ್ಲಿದ್ದಾಗ ಹಿಂಗಾಲಿನ ನೋವಿಗೆ ಒಳಗಾಗಿ ಪಂದ್ಯ ಕೈಬಿಟ್ಟರು.
ದಕ್ಷಿಣ ಕೊರಿಯಾದ ಕಿಮ್ ಗಾ ವ್ಯೂನ್ ಎದುರಿನ ಪಂದ್ಯದಲ್ಲಿ 21–19, 18–21, 1–8ರ ಹಿನ್ನಡೆಯಲ್ಲಿದ್ದ ಸಂದರ್ಭದಲ್ಲಿ ಸೈನಾ ಕೂಡ ಅಂಗಣ ತೊರೆಯಬೇಕಾಯಿತು.
‘ಸೈನಾ ಕರುಳುಬೇನೆಯಿಂದ ಬಳಲುತ್ತಿದ್ದು ಈ ಕಾರಣದಿಂದಲೇ ಪಂದ್ಯವನ್ನು ಪೂರ್ತಿಗೊಳಿಸಲು ಆಗಲಿಲ್ಲ. ನಿನ್ನೆ ಚಿಕಿತ್ಸೆ ಪಡೆದುಕೊಂಡಿದ್ದ ಅವರು ಆಸ್ಪತ್ರೆಯಿಂದ ನೇರವಾಗಿ ಕ್ರೀಡಾಂಗಣಕ್ಕೆ ಬಂದಿದ್ದರು’ ಎಂದು ಅವರ ಪತಿ ಹಾಗೂ ಕೋಚ್ ಪರುಪಳ್ಳಿ ಕಶ್ಯಪ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.